ರಾಷ್ಟ್ರೀಯ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಮಹಾತ್ಮ ಗಾಂಧಿಜೀ 155 ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ರವರ ಜಯಂತಿ ಆಚರಣೆ.
ಶಿಡ್ಲಘಟ್ಟ : ರಾಷ್ಟ್ರಪಿತ ಮಹಾಗಾಂಧಿಜೀ ಅವರ 155 ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನ ರಾಷ್ಟ್ರೀಯ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು.
ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿಮಂತ್ರಿ ಸ್ವಾತಂತ್ರ್ಯ ಹೋರಾಟಗಾರರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರವಿಟ್ಟು ಪುಷ್ಪ ಮಾಲೆ ಹಾಕಿ ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಶ್ರಮದಾನ : ಸ್ವಚ್ಚತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಶಾಸಕ ಬಿ.ಎನ್ ಅವರು ಸ್ವತಃ ಚನಿಕೆ ಹಿಡಿದು ಸ್ವಚ್ಚತೆ ಕಾರ್ಯದಲ್ಲಿ ಭಾಗವಹಿಸಿ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಚತೆಯಿಂದ ಇಟ್ಟುಕೊಳ್ಳುವಂತೆ ಸಂದೇಶ ಸಾರಿದರು. ಸ್ಥಳೀಯ ಜನಪ್ರತಿನಿಧಿಗಳು, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಹಳೇ ಕಟ್ಟಡಗಳ ಆವರಣದಲ್ಲಿ ಬೆಳೆದಿದ್ದ ಗಿಡ ಗಂಟಿಗಳು ಸ್ವಚ್ಛಗೊಳಿಸಿ ಶ್ರಮದಾನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಶಾಸಕ ಬಿ.ಎನ್ ರವಿಕುಮಾರ್ ಅವರು ಮಾತನಾಡಿ ಸತ್ಯ, ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಮಹಾತ್ಮಗಾಂಧಿಯವರನ್ನ ನಾವೆಲ್ಲರೂ ಸ್ಮರಿಸಬೇಕು. ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು, ಸತ್ಯ, ಅಹಿಂಸೆ, ಸತ್ಯ ಮೇವ ಜಯತೆ ಎಂಬ ಘೋಷ ವಾಕ್ಯ, ಅವರ ಆದರ್ಶಗಳು ನಾವೆಲ್ಲರೂ ಅನುಸರಿಸಬೇಕು. ದೇಶ ಕಂಡ ಅಪ್ರತಿಮ ಆಡಳಿತಗಾರ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಡಳಿತದಲ್ಲಿ ದೇಶದಲ್ಲಿ ಬಡತನ ಬಂದಿದ್ದ ಅಂದಿನ ಕಾಲಘಟ್ಟದಲ್ಲಿ ವಾರದಲ್ಲಿ ಒಂದು ದಿನ ಉಪವಾಸ ಇರುತ್ತಿದ್ದರು. ಜೊತೆಗೆ ಅವರ ಮನೆಯ ಮುಂದೆ ಆಹಾರ ಪದಾರ್ಥಗಳು ಬೆಳೆಯಲು ಪ್ರಾರಂಭಿಸಿ ಕೃಷಿ ಮಾಡುವುದನ್ನು ತೋರಿಸಿಕೊಟ್ಟರು. ಇಂದಿನ ರಾಜಕಾರಣಿಗಳು, ಅಧಿಕಾರಿಗಳು, ಮಹಾತ್ಮಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರೀ, ಡಾ ಬಿ.ಆರ್ ಅಂಬೇಡ್ಕರ್, ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವು ಮಹನೀಯರ ಮೌಲ್ಯಗಳನ್ನ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್ ಸ್ವಾಮಿ, ನಗರಸಭೆ ಪೌರಾಯುಕ್ತ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಗ್ರೇಡ್ – 2 ತಹಶೀಲ್ದಾರ್ ಪೂರ್ಣಿಮಾ, ನಗರಸಭೆ ಅಧ್ಯಕ್ಷ ಎಂ.ವಿ ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪನವೀನ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ, ನಗರಸಭೆಯ ಸದಸ್ಯರಾದ ಅನಿಲ್ ಕುಮಾರ್, ನಾರಾಯಣಸ್ವಾಮಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಭಾಗವಹಿಸಿದ್ದರು.
ವರದಿ : ಕೋಟಹಳ್ಳಿ ಅನಿಲ್ ಕುಮಾರ್