ಶಿಡ್ಲಘಟ್ಟ : ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಮಾನತೆ, ಐಕ್ಯತೆ, ಸಾಮರಸ್ಯ, ಸಾಮಾಜಿಕ ನ್ಯಾಯವನ್ನು ಬಿಂಬಿಸುವ ಐತಿಹಾಸಿಕ ಉದ್ದದ ಮಾನವ ಸರಪಳಿ ಸೃಷ್ಟಿಸಲಾಯಿತು.
ರಾಜ್ಯದಲ್ಲಿ ಬೀದರ್ ನಿಂದ ಚಾಮರಾಜನಗರದವರೆಗೂ 31 ಜಿಲ್ಲೆಗಳನ್ನೊಳಗೊಂಡ 2,500 ಕಿ.ಮೀ ಉದ್ದದ ಮಾನವ ಸರಪಳಿಯನ್ನು ರಚಿಸಲು ಸರ್ಕಾರ ಕಾರ್ಯಕ್ರಮವನ್ನ ರೂಪಿಸಲಾಗಿತ್ತು. ಶಿಡ್ಲಘಟ್ಟ ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕಿನ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾವಿರಾರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರ ಸಹಯೋಗದಲ್ಲಿ ಮಾನವ ಸರಪಳಿ ರಚಿಸಲಾಯಿತು. ತಾಲ್ಲೂಕಿನ ಲಕ್ಕಹಳ್ಳಿ ಗೇಟ್ ಬಳಿ ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರು ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ರವರ ಸಮ್ಮುಖದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಶಾಸಕ ಬಿ.ಎನ್ ರವಿಕುಮಾರ್ ಮಾತನಾಡಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯಗಳು ಯುವ ಜನತೆಗೆ ಅರಿವು ಮೂಡಿಸುವ ಮೂಲಕ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಡಾ ಬಿ.ಆರ್ ಅಂಬೇಡ್ಕರ್ , ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಬಾಯಿ ಪಟೇಲ್, ಮಹಾತ್ಮ ಗಾಂಧಿ, ಸೇರಿದಂತೆ ಅನೇಕ ಮಹನೀಯರನ್ನ ನಾವೆಲ್ಲರೂ ಸ್ಮರಿಸಬೇಕು ಎಂದರು
ಲಕ್ಕಹಳ್ಳಿ ಗೇಟ್ ನಿಂದ ಆರಂಭವಾದ ಮಾನವ ಸರಪಳಿ ಶಿಡ್ಲಘಟ್ಟ ನಗರ ಮಾರ್ಗವಾಗಿ ಆನೂರು ಗೇಟ್, ಚೀಮಂಗಲ, ಹೆಚ್ ಕ್ರಾಸ್, ಚೊಕ್ಕಂಡಹಳ್ಳಿಯವರೆಗೆ ಸುಮಾರು 25 ಕಿ.ಮೀ ದೂರದ ಸಾವಿರಾರು ವಿದ್ಯಾರ್ಥಿಗಳು, ನಾಗರೀಕರು, ಕೈ ಜೋಡಿಸಿ ಮಾನವ ಸರಪಳಿ ನಿರ್ಮಿಸಲಾಗಿತ್ತು. ಸಮಾಜಕಲ್ಯಾಣ ಇಲಾಖೆಯಿಂದ ಶಾಲಾ ಮಕ್ಕಳಿಗೆ ಬಿಸ್ಕೆಟ್, ನೀರಿನ ಬಾಟಲ್ ವಿತರಿಸಿದರು. ಮಾನವ ಸರಪಳಿ ರಚಿಸಲು ಜವಬ್ದಾರಿ ವಹಿಸಿದ್ದ ಕೆಲವು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಮಾನವ ಸರಪಳಿ ಕೆಲವು ಕಡೆ ಅಪೂರ್ಣವಾಗಿತ್ತು. ಲಕ್ಕಹಳ್ಳಿ ಗೇಟ್ ಬಳಿ ಮಾನವ ಸರಪಳಿ ರಚಿಸಿ ಕೈಗಳು ಮೇಲೆತ್ತಿರುವ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಅವರ ಕಾಲಿನ ಬಳಿ ಸಂವಿಧಾನ ಪೀಠಿಕೆಯ ಪ್ರತಿ ಇದ್ದರೂ ಪೀಠಿಕೆ ಪ್ರತಿಯನ್ನ ತೆಗೆದುಕೊಳ್ಳದೇ ಅಗೌರವ ತೋರಿರುವುದು ಕಂಡುಬಂದಿದೆ.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎನ್ ಸ್ವಾಮಿ, ತಾಲ್ಲೂಕು ಪಂಚಾಯಿತಿ ಇ.ಓ ಹೇಮಾವತಿ, ನಗರಸಭೆ ಪೌರಾಯುಕ್ತ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್ ಸುಬ್ಬಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ನಾಗರೀಕರು ಭಾಗವಹಿಸಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್