ಶಿಡ್ಲಘಟ್ಟ: ಶಿಕ್ಷಕರು ಮಕ್ಕಳಿಗೆ ಬುದ್ದಿ ಹೇಳಿ ತಿದ್ದಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡುವವರು, ಹಿಂದೆ ಗುರು ಇರಬೇಕು. ಮುಂದೆ ಗುರಿ ಇರಬೇಕು ಎಂಬ ಮಾತುಗಳು ಹಲವು ಕಡೆ ಹಿರಿಯರು ಹೇಳಿರುವುದು ಕೇಳಿರುತ್ತೇವೆ. ಆದರೆ ಸರ್ಕಾರಿ ಕಾರ್ಯಕ್ರಮದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಟ ಜ್ಞಾನ ಅರಿವಿಲ್ಲದೆ ಶಾಸಕರು, ಸಂಸದರ ಮುಂದೆಯೇ ಹೂವು ಮಳೆ ಸುರಿಸಿಕೊಂಡು ಸರ್ಕಾರಿ ಕಾರ್ಯಕ್ರಮದಲ್ಲಿ ನಿಯಮಗಳು ಗಾಳಿಗೆ ತೂರಿ ಸುದ್ದಿಯಾಗಿದ್ದಾರೆ.
ಹೌದು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಇಂದು ಶನಿವಾರದಂದು ನಗರದ ಹೊರವಲಯದ ಹಂಡಿಗನಾಳ ಬಾಲಾಜಿ ಕನ್ವೆಷನ್ ಹಾಲ್ ನಲ್ಲಿ ಭಾರತ ರತ್ನ ಡಾ ಎಸ್. ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎಂ ಮುನಿರಾಜು ಅವರಿಗೆ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿಯೇ ಶಿಕ್ಷಕರ ತಂಡವೊಂದು ವೇದಿಕೆಯ ಮೇಲೆ ಬೃಹತ್ ಹೂವಿನ ಹಾಕಿ ಸನ್ಮಾನಿಸುವುದರ ಜೊತೆಗೆ ತಲೆಗೆ ರಾಜರ ಪೇಟ ತೊಟ್ಟು ಗುಲಾಬಿ, ಸೇವಂತಿ ಹೂವಿನ ಮಳೆ ಸುರಿಸಿ ತಾವು ಎಲ್ಲರಿಂತ ವಿಭಿನ್ನ, ವಿಶೇಷವೆಂದು ತೋರಿಸಿಕೊಂಡಿದ್ದಾರೆ. ಇದು ಯಾವುದೋ ಖಾಸಗಿ ಕಾರ್ಯಕ್ರಮವಾಗಿದ್ದರೆ, ಯಾರ ಅಕ್ಷೇಪ ಇರುತ್ತಿರಲಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಎರಡು ಮಕ್ಕರಿಯ ತುಂಬಾ ಗುಲಾಬಿ ಮತ್ತು ಸೇವಂತಿ ಹೂವುಗಳು ತುಂಬಿ ಅವರ ಮೇಲೆ ಸುರಿಸಿಕೊಂಡು ಸಂಭ್ರಮಿಸಿದರು. ಕೆಲವು ಶಿಕ್ಷಕರು ಇದೆಲ್ಲವೂ ಬೇಕಿತ್ತಾ, ತೋರ್ಪಡಿಕೆಗೆ ಹೀಗೆ ಮಾಡುತ್ತಾರೆ. ಯಾರದ್ದೊ ದುಡ್ಡು, ಮತ್ಯಾರದ್ದೋ ಶೋಕಿ ಎಂದು ಮಾತನಾಡಿಕೊಳ್ಳುತ್ತಿದ್ದರು. ಇನ್ನು ಮುಂದೆಯಾದರೂ ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿಯ ಶೋಕಿ ಆರ್ಭಟಗಳು ಮಾಡುವುದು ಬಿಟ್ಟು ಸರ್ಕಾರಿ ಕಾರ್ಯಕ್ರಮವನ್ನು ಶಿಸ್ತುಬದ್ದವಾಗಿ ನಡೆಸಬೇಕು. ಸರ್ಕಾರದ ಹಣ ದುರುಪಯೋಗವಾಗದಂತೆ ಜೊತೆಗೆ ಸರ್ಕಾರಿ ಕಾರ್ಯಕ್ರಮ ಒಬ್ಬ ವ್ಯಕ್ತಿಯ ತೋರ್ಪಡಿಕೆಗೆ ಸೀಮಿತವಾಗಬಾರದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.