ಶಿಡ್ಲಘಟ್ಟ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲ್ಲೂಕು ಆಡಳಿತ ಸಕಲ ಸಿದ್ದತೆಗಳು ಮಾಡಿಕೊಂಡಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು, ಹಾಗೂ ಕನ್ನಡ ಪರ, ದಲಿತ ಪರ, ರೈತಪರ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಾಲಾ –ಕಾಲೇಜು ವಿದ್ಯಾರ್ಥಿಗಳು , ಸಾರ್ವಜನಿಕರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಹಶೀಲ್ದಾರ್ ಬಿ.ಎನ್ ಸ್ವಾಮಿ ಕರೆ ನೀಡಿದರು.
ತಾಲ್ಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಬುಧವಾರದಂದು ನಡೆದ “ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ”ಯ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸೆಪ್ಟೆಂಬರ್ 15 ರಂದು ತಾಲ್ಲೂಕಿನ ಲಕ್ಕಹಳ್ಳಿಯಿಂದ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಆರಂಭವಾಗಿ ಶಿಡ್ಲಘಟ್ಟ ನಗರ, ಆನೂರು ಗೇಟ್, ಬ್ಯಾಟರಾಯನಸ್ವಾಮಿ ದೇವಸ್ಥಾನ ಮಾರ್ಗವಾಗಿ, ಚೀಮಂಗಲ ಹೆಚ್ ಕ್ರಾಸ್, ಚೊಕ್ಕಂಡಹಳ್ಳಿಯವರೆಗೆ ಸುಮಾರು 26 ಕಿಮೀ ಉದ್ದದ ಬೃಹತ್ ಮಾನವ ಸರಪಳಿ ನಿರ್ಮಿಸುವ ಗುರಿ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕೈ ಜೋಡಿಸಬೇಕು ಸರ್ಕಾರ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲು ಆದೇಶ ಹೊರಡಿಸಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ಭಾರತಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನ ಶಿಲ್ಪ ಬಾಬಾ ಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್ ಅವರನ್ನ ನಾವೆಲ್ಲರೂ ಸ್ಮರಿಸಬೇಕು ಎಂದರು.
ಬೃಹತ್ ಮಾನವ ಸರಪಳಿ ನಿರ್ಮಿಸಬೇಕಿದೆ. ಮಾನವ ಸರಪಳಿ ಸಿದ್ದತೆ ಕೈಗೊಳ್ಳಲು ಪ್ರಭಾರ ವಹಿಸಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು, ಸ್ವ-ಸಹಾಯ ಸಂಘಗಳ ಸದಸ್ಯರು ಪದಾಧಿಕಾರಿಗಳೆಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಜಗದೀಶ್, ನಗರಸಭೆ ಪೌರಾಯುಕ್ತ ಮಂಜುನಾಥ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದಅಧಕಾರಿಗಳು, ವಿವಿ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.