ಚಿಕ್ಕಬಳ್ಳಾಪುರ : ಮ್ಯಾಟ್ರಿಮೋನಿಯ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷಗಟ್ಟಲೆ ಹಣ ಪಡೆದುಕೊಂಡು ಹಲವರಿಗೆ ವಂಚನೆ ಮಾಡಿರುವ ಬೆಂಗಳೂರಿನ ಖತರ್ನಾಕ್ ಲೇಡಿಯನ್ನ ಪತ್ತೆ ಹಚ್ಚಿ ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಗೌರಿಬಿದನೂರು ನಗರದ ನಿವಾಸಿ ರಾಘವೇಂದ್ರ ಎಂಬ ವ್ಯಕ್ತಿ ಕಲ್ಯಾಣ್ ಮ್ಯಾಟ್ರಿಮೋನಿಯಲ್ಲಿ ಮದುವೆಯಾಗಲು ರಿಜಿಸ್ಟರ್ ಮಾಡಿದ್ದು ಕೋಮಲ ಎಂಬ ಮಹಿಳೆಯ ಮ್ಯಾಟ್ರಿಮೋನಿ ಐಡಿಗೆ ರಿಕ್ವೆಸ್ಟ್ ಕಳುಹಿಸಿದ್ದು, ನಂತರ ಆಕೆ ತನ್ನ ಮೊಬೈಲ್ ನಂಬರ್ ನಿಂದ ಮೆಸೇಜ್ ಮಾಡಿ ತನ್ನ ಗಂಡ ತೀರಿ ಹೋಗಿದ್ದು ಮಕ್ಕಳು ಇರುವುದಿಲ್ಲ, ತಾನು ಸಹ ಮದುವೆಯಾಗಲು ಇಚ್ಛಿಸುತ್ತೇನೆಂದು ಹೇಳಿ ತನ್ನೊಂದಿಗೆ ಚಾಟಿಂಗ್ ಮಾಡಿದಲ್ಲದೆ ಆಕೆಯ ಗಂಡನ ಮೃತ ಪರಿಹಾರ ಹಣ 6 ಕೋಟಿ ರೂಪಾಯಿಗಳು ಟ್ಯಾಕ್ಸ್ ಕಟ್ಟದ ಕಾರಣ ಆಕೆಯ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್ ಆಗಿದ್ದು, ಟ್ಯಾಕ್ಸ್ ಕಟ್ಟಲು ಹಣ ಬೇಕೆಂದು ಹೇಳಿ ರಾಘವೇಂದ್ರ ಬಳಿ ರೂ 7,40,000= 00 ರೂಗಳನ್ನು ಕೋಮಲ ತಾಯಿ ರಾಧ ಎಂಬುವರು ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡ ಬಳಿಕ ರಾಘವೇಂದ್ರ ಅವರ ಫೇಸ್ ಬುಕ್ ಮತ್ತು ಇನ್ಸ್ಟಾ ಗ್ರಾಮ್ ನಲ್ಲಿ ಬ್ಲಾಕ್ ಮಾಡಿ ಮೊಬೈಲ್ ನಾಟ್ ರೀಚೆಬಲ್ ಮಾಡಿಕೊಂಡಿದ್ದಾಳೆ. ಇದಾದ ಬಳಿಕ ರಾಘವೇಂದ್ರ ತಾನು ಮೋಸ ಹೋಗಿರುವುದಾಗಿ ಅರಿತು ದಿನಾಂಕ: 23-08-2024 ರಂದು ಚಿಕ್ಕಬಳ್ಳಾಪುರ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣವನ್ನ ದಾಖಲಿಸಿಕೊಂಡು ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿ ಕೋಮಲ ಅವರ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ.
ಈಕೆಯು ಗುಜರಾತ್ ನಲ್ಲಿ ನೆಲೆಸಿರುವ ಕುಂದಾಪುರದ ವಾಸಿ ರಾಘವೇಂದ್ರ ಎಂಬುವವರಿಗೆ ಮೋಸ ಮಾಡಿ ರೂ 25,000 = 00 ಹಾಕಿಸಿಕೊಂಡಿದ್ದು, ಈ ಸಂಬಂಧ ಗುಜರಾತ್ ರಾಜ್ಯದ ವಲಸಾಡ್ ನ ಧರಮ್ ಪುರ್ ಪೊಲೀಸ್ ಠಾಣೆಯಲಿ. ಆನ್ ಲೈನ್ ಪ್ರಕರಣ ದಾಖಲಾಗಿರುತ್ತದೆ.
ಜೊತೆಗೆ ಬೆಂಗಳೂರು ನಗರದ ವಾಸಿಯಾದ ನಾಗರಾಜು ಎಂಬುವವರ ಬಳಿ ರೂ 1,50,000 = 00 ಹಣ ಹಾಕಿಸಿಕೊಂಡಿದ್ದು ಮೋಸ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ಆನ್ ಲೈನ್ ಪ್ರಕರಣ ದಾಖಲಾಗಿರುತ್ತದೆ,
ಆರೋಪಿ ಪತ್ತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿಕ್ಕಬಳ್ಳಾಪುರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ರವಿಕುಮಾರ್ ಕೆ.ವೈ. ಡಿ.ವೈ.ಎಸ್.ಪಿ. ಸಿ.ಇ.ಎನ್. ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಮಹಿಳಾ ಪಿಸಿ ಭಾಗ್ಯಮ್ಮ ಮಪಿಸಿ-414 ರವರನ್ನೊಳಗೊಂಡ ಅಪರಾಧ ಪತ್ತೆ ತಂಡ ರಚಿಸಿ ಆರೋಪಿ ಕೋಮಲ ಅವರನ್ನ ದಸ್ತಗಿರಿ ಮಾಡಿ ಆರೋಪಿ ಕಡೆಯಿಂದ ಒಂದು ಆಫಲ್ ಪೋನ್, ಆಪಲ್ ವಾಚ್, ರೂ 20,940 = 00 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಗೆ ಈಗಾಗಲೇ 20 ವರ್ಷದ ಗಂಡು ಮಗ ಮತ್ತು 16 ವರ್ಷದ ಮಗಳಿದ್ದು ಈಕೆಯ ಗಂಡ ರಮೇಶ್ ಎಂಬುವವರು ಶಿವಮೊಗ್ಗದಲ್ಲಿ ಕೆ.ಪಿ.ಟಿ.ಸಿ.ಎಲ್. ನೌಕರನಾಗಿದ್ದು 2017 ನೇ ವರ್ಷದಲ್ಲಿ ಮೃತಪಟ್ಟಿರುತ್ತಾನೆ. ಈಕೆಯು ತನ್ನ ವಿಲಾಸಿ ಜೀವನಕ್ಕಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜನರಿಗೆ ಮೋಸ ಮಾಡಿರುವುದು ತನಿಖೆಯಿಂದ ದೃಡಪಟ್ಟಿರುತ್ತೆ ಎಂದು ಪೊಲೀಸರು ಪತ್ರಿಕಾ ಮೂಲಕ ಮಾಹಿತಿಯನ್ನ ತಿಳಿಸಿದ್ದಾರೆ.