ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ನಟಿ ಪವಿತ್ರಾಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಗರದ ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
ಬುಧವಾರ ಇಂದು ಮಧ್ಯಾಹ್ನ 2.45ಕ್ಕೆ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ, ದರ್ಶನ್ ಹಾಗೂ ಸಹಚರರ ಮೇಲೆ ಇರುವುದು ಗಂಭೀರ ಆರೋಪ ಆದ್ದರಿಂದ ಹಲವು ಆಯಾಮದಲ್ಲಿ ತನಿಖೆ ಮಾಡಲಾಗಿದೆ.
ಜಾಮೀನು ಪಡೆಯಲು ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ವಕೀಲರು ವಾದ ಮಾಡಿದ್ದಾರೆ. ರೇಣುಕಾಸ್ವಾಮಿ ಕಪಾಳಕ್ಕೆ ಪವಿತ್ರಾ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಆಕೆ ಕೊಲೆಯ ಒಳಸಂಚಿನ ಭಾಗ ಎನ್ನಲಾಗುವುದಿಲ್ಲ. ಸಂಪೂರ್ಣ ಕೇಸನ್ನು ಆರೋಪಿಗಳ ಸ್ವಇಚ್ಛಾ ಹೇಳಿಕೆ ಆಧರಿಸಲಾಗಿದೆ. ಯಾವುದೇ ಪ್ರತ್ಯಕ್ಷದರ್ಶಿ ಹೇಳಿಕೆ ದಾಖಲಾಗಿಲ್ಲ. ಕೊಲೆಯ ಸಂಚೇ ಅಥವಾ ಆಕಸ್ಮಿಕ ಸಾವೇ ಎಂಬುದು ನಂತರ ತಿಳಿಯಬೇಕಿದೆ. ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಮಹಿಳೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.
ದರ್ಶನ್ ಜೊತೆ ಪವಿತ್ರಾ ಗೌಡ ಅವರಿಗೆ ಆಪ್ತ ಒಡನಾಟ ಇದೆ. ದರ್ಶನ್ ಹಾಗೂ ವಿಜಯಲಕ್ಷ್ಮೀ ಸಂಸಾರದಲ್ಲಿ ಬಿರುಕು ಮೂಡಲು ಪವಿತ್ರಾ ಕಾರಣ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಪವಿತ್ರಾಗೆ ಆಶ್ಲೀಲ ಮೆಸೇಜ್ ಬಂದಿದ್ದರಿಂದಲೇ ದರ್ಶನ್ ಹಾಗೂ ಡಿ-ಗ್ಯಾಂಗ್ ಸದಸ್ಯರು ರೇಣುಕಾ ಸ್ವಾಮಿಯನ್ನು ಅಪಹರಿಸಿ ಕೊಂದರು ಎಂಬ ಆರೋಪ ಇದೆ. ದರ್ಶನ್, ಪವಿತ್ರಾ ಗೌಡ ಸೇರಿ ಅನೇಕರು ಈ ಕೇಸ್‌ನಲ್ಲಿ ಜೈಲು ಸೇರಿದ್ದಾರೆ.
ಈ ಕೇಸ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಗುವುದು ಕಷ್ಟ ಆಗಿದೆ. ಇನ್ನೇನು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕು ಎಂಬಷ್ಟರಲ್ಲಿ ಜೈಲಿನಿಂದ ಶಾಕಿಂಗ್ ಫೋಟೋ ಮತ್ತು ವಿಡಿಯೋಗಳು ಲೀಕ್ ಆದವು. ಪರಪನ ಆಗ್ರಹಾರದ ಜೈಲಿನ ನಿಯಮಗಳನ್ನು ಉಲ್ಲಂಘಿಸಿ, ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿದೆ ಎಂಬುದಕ್ಕೆ ಈ ಫೋಟೋ ಸಾಕ್ಷಿ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಹೊಸ 3 ಎಫ್ ಐಆರ್ ದಾಖಲಾಗಿವೆ. ಅವುಗಳಲ್ಲಿ 2ರಲ್ಲಿ ದರ್ಶನ್ ಎಂ ಆಗಿದ್ದಾರೆ. ಈ ಕಾರಣದಿಂದ ಜಾಮೀನು ಪಡೆಯುವುದು ಅವರಿಗೆ ಇನ್ನಷ್ಟು ಕಷ್ಟ ಆಗಲಿದೆ.