ಗೌರಿಬಿದನೂರು: ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ ಮಹನೀಯರ ಜಯಂತಿಯನ್ನು ಸರಕಾರ ಆಚರಣೆ ಮಾಡುತ್ತಿದೆ, ಇದರರ್ಥ ಮಹನೀಯರ ಆದರ್ಶ ಹಾಗೂ ಮಾರ್ಗದರ್ಶನವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜಯಂತಿಗಳನ್ನು ಮಾಡಲಾಗುತ್ತದೆ ಎಂದು ಮಡಕಶಿರಾ ಮಂಡಲ್ನ ಕಲ್ಮುರಿ ಶ್ರೀ ವೀರಕೇತಮ್ಮ ದೇವಾಲಯ ಸಂಸ್ಥಾಪಕ ಶ್ರೀಗಂಗಾಧರ ಸ್ವಾಮೀಜಿ ಹೇಳಿದರು.
ತಾಲೂಕಿನ ರಮಾಪುರ ಗ್ರಾಮದ ಶ್ರೀ ಸವಿತಾ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಶ್ರೀ ಸವಿತಾ ಮಹಿರ್ಷಿ ಮಂದಿರ ನಿರ್ಮಾಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಾಯಿತ್ರಿ ದೇವಿ ಜಯಂತಿ, ಮತ್ತು ಡಾ.ಡಿ.ದೇವರಾಜ ಅರಸು ಜಯಂತಿ ಹಾಗೂ ಭಾರತ ರತ್ನ ಕರ್ಪೂರಿ ಠಾಕೂರ್ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಆರ್ಶೀವಚನ ನೀಡಿದ ಅವರು, ಮಾನವ ಜೀವನದಲ್ಲಿ ಸ್ವಾರ್ಥವನ್ನು ಬದಿಗೊತ್ತಿ ತನ್ನ ಸಂಪಾದನೆಯಲ್ಲಿ ಅಲ್ಪವಾದರೂ ಸಮಾಜದ ಏಳಿಗೆಗೆ ವಿನಿಯೋಗಿಸಬೇಕು ಆಗ ಮಾತ್ರ ಮನಸ್ಸಿಗೆ ನೆಮ್ಮದಿ ಹಾಗು ಬದುಕು ಹಸನಾಗಲು ಸಾಧ್ಯ ಎಂದು ತಿಳಿಸಿದರು.
ಮಾಗಡಿ ತಾಲೂಕಿನ ಗುಡೇಮಾರನಹಳ್ಳಿಯ ಶ್ರೀ ಆದಿಶಕ್ತಿ ಮಹೇಶ್ವರಿ ದೇವಾಲಯದ ಸಂಸ್ಥಾಪಕಿ ಶ್ರೀಮತಿ ಭವ್ಯ ತಾಯಮ್ಮ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಮಹನೀಯರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ ಅಂತಹ ಮಹಾತ್ಮರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು, ಮಹಿಳೆಯರು ಮನೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯಗಳನ್ನು ಮಾಡುವ ಮೂಲಕ ಮನೆಯನ್ನು ಬೆಳಗಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಿತಾ ಮಹರ್ಷಿ ದೇವಾಲಯದ ವ್ಯವಸ್ಥಾಪಕ ಆರ್.ಜಿ.ತ್ಯಾಗರಾಜ್ ಮಾತನಾಡಿ, ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಶ್ರೀ ಸವಿತಾ ಮಹರ್ಷಿ ದೇವಾಲಯನ್ನು ರಮಾಪುರ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿದೆ, ಇದು ನಮ್ಮ ತಾಲೂಕಿಗೆ ಹೆಮ್ಮಯಾಗಿದೆ ಎಂದ ಅವರು, ಆದರ್ಶ ವ್ಯಕ್ತಿಗಳ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಉದ್ದೇಶವಾಗಿದೆ ಎಂದರು.
ಪ್ರೊ.ಬಿ.ವಿ.ಪ್ರಕಾಶ್, ಮತ್ತು ಪ್ರೊ.ಪಿಬಿ.ವೆಂಕಟಾಚಲಪತಿ ರವರುಗಳು ಶ್ರೀ ಗಾಯಿತ್ರಿ ದೇವಿಯ ಚರಿತ್ರೆಯ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಗಾಯಿತ್ರಿದೇವಿ ಮತ್ತು ಸವಿತಾ ಮಹರ್ಷಿ ಭಾವಚಿತ್ರದೊಂದಿಗೆ ಮುತ್ತಿನ ಪಲ್ಲಕ್ಕಿಯಲ್ಲಿ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ಸವಿತಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ.ಲಕ್ಷ್ಮೀಜಿ, ಮಧುಗಿರಿ ಸವಿತಾ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶಿವಕುಮಾರ್, ತುಮಕೂರು ಜಿಲ್ಲಾಧ್ಯಕ್ಷ ಮಂಜೇಶ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಬಾಲೃಷ್ಣ, ಲೋಕೇಶ್, ಠಾಕೂರು ಸಂಘಟನೆ ಪ್ರಧಾನ ಕಾರ್ಯದರ್ಶಿ ಕೋಮಲ, ಪ್ರಾಂಶುಪಾಲರಾದ ನವೀನ್, ಪ್ರಕಾಶ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ರಾಘವೇಂದ್ರ, ತಾಲೂಕು ಅಧ್ಯಕ್ಷ ಜಿ.ಡಿ.ಶಿವಕುಮಾರ್, ನಗರಸಭೆ ಮಾಜಿ ಸದಸ್ಯ ನಾಗೇಶ್, ಮುಂತಾದವರ ಉಪಸ್ಥಿತರಿದ್ದರು.