ಗೌರಿಬಿದನೂರು : ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ವಿಜ್ಞಾನ ಹಬ್ಬವಾದ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಡಾ. ಕೆ.ವಿ. ಪ್ರಕಾಶ್ ಮಾತನಾಡಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ -3 ಯಶಸ್ವಿ ಸಾಧನೆಯ ಸ್ಮರಣಾರ್ಥ, ಸವಿ ನೆನಪಿಗಾಗಿ ದೇಶಾದ್ಯಂತ ಆಗಸ್ಟ್ 23 ರಂದು ಭಾರತದ ಬಾಹ್ಯಾಕಾಶ ದಿನವನ್ನಾಗಿ ಆಚರಿಸುತ್ತಿದ್ದು,ಇದು ದೇಶದ ಮೈಲುಗಲ್ಲಾಗಿದ್ದು ವೈಜ್ಞಾನಿಕ ಸಂಭ್ರಮಾಚರಣೆ ಆಗಿದೆ.
ಈ ದಿನದ ಮಹತ್ವದ ವಾಕ್ಯ: ಚಂದ್ರನನ್ನು ಸ್ಪರ್ಶಿಸುವುದು: ಜೀವನವನ್ನು ಸ್ಪರ್ಶಿಸುವುದು, ಚಂದ್ರಯಾನದಿಂದ ನಾವು ಚಂದ್ರನ ಮೇಲ್ಮೈ ವಾತಾವರಣ, ಖನಿಜಗಳ ಇರುವಿಕೆ,ಆಂತರಿಕ ವ್ಯವಸ್ಥೆ, ಸಂವಹನ,ಹವಾಮಾನ ಮುನ್ಸೂಚನೆ, ಸಂಚಾರ, ವಿಪತ್ತು ನಿರ್ವಹಣೆ, ಬಾಹ್ಯಾಕಾಶ ಅನ್ವೇಷಣೆ, ತಂತ್ರಜ್ಞಾನ ಮತ್ತಿತರ ವಿಷಯಗಳ ಬಗ್ಗೆ ಸಂಶೋಧನೆ ಮಾಡಬಹುದೆಂದು ತಿಳಿಸಿದರು. ಮುಖ್ಯ ಶಿಕ್ಷಕಿ ಎಂ. ಶೋಭಾ ಮಾತನಾಡಿ, ಈ ವಿಜ್ಞಾನದ ಹಬ್ಬ ರಾಷ್ಟ್ರೀಯ ಹೆಮ್ಮೆ ಮತ್ತು ಐಕ್ಯತೆಯ ಭಾವವನ್ನು ಮೂಡಿಸುತ್ತದೆ. ಚಂದ್ರಯಾನ- 3ರ ಯಶಸ್ಸಿಗೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳಿಗೆ, ತಂತ್ರಜ್ಞರಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕು. ಇಂತಹ ದಿನಾಚರಣೆಗಳನ್ನು ಆಚರಿಸುವುದರಿಂದ ಸಾರ್ವಜನಿಕರಲ್ಲಿ, ಪೋಷಕರಲ್ಲಿ, ಶಿಕ್ಷಕರಲ್ಲಿಮತ್ತು ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಕಲ್ಪನೆ ಮೂಡಿಸಬಹುದು ಎಂದು ತಿಳಿಸಿದರು. ಶಾಲಾ ಶಿಕ್ಷಕರು ಪುಟಾಣಿಗಳಿಗೆ ಬಾಹ್ಯಾಕಾಶ ಕುರಿತಂತೆ ಸೃಜನಾತ್ಮಕ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಭಾರ್ಗವಿ,ಸಾಯಿ ಪ್ರಿಯ,ಸಂಧ್ಯಾ ಮತ್ತು ಚಂದ್ರಮ್ಮ ಉಪಸ್ಥಿತರಿದ್ದರು.