ಶಿಡ್ಲಘಟ್ಟ: ಮುಡಾ ವಿಚಾರದಲ್ಲಿ ಖಾಸಗಿ ಸುಳ್ಳು ದೂರನ್ನ ಆಧರಿಸಿ ಸಿದ್ದರಾಮಯ್ಯ ಅವರ ವಿರುದ್ದ ಪ್ರಾಸಿಕ್ಯೂಷನ್ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿರುವುದು ಸಂವಿಧಾನ ವಿರುದ್ದವಾಗಿದೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ರಾಜ್ಯಪಾಲರು ನಡೆದುಕೊಂಡಿದ್ದಾರೆ. ಕಾಂಗ್ರೇಸ್ ಪಕ್ಷಕ್ಕೆ ರಾಜ್ಯದ ಜನ 136 ಸೀಟುಗಳು ಕೊಟ್ಟು ಸ್ಥಿರ ಸರ್ಕಾರ ರಚಿಸಿದ್ದಾರೆ. ಸರ್ಕಾರವನ್ನ ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಪ್ರಯತ್ನ ಮಾಡುತ್ತಿರುವುದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲವೆಂದು ಕ್ಷೇತ್ರದ ಪರಾಜಿತ ಕಾಂಗ್ರೇಸ್ ಮುಖಂಡ ಪುಟ್ಟು ಆಂಜಿನಪ್ಪ ಗುಡುಗಿದರು.
ತಾಲ್ಲೂಕು ಕಾಂಗ್ರೇಸ್ ಸಮಿತಿ ವತಿಯಿಂದ ಪುಟ್ಟು ಆಂಜಿನಪ್ಪ ನೇತೃತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಿದರು. ನಗರದ ಬಸ್ ನಿಲ್ದಾಣದಿಂದ ನೂರಾರು ಕಾರ್ಯಕರ್ತರು, ಮುಖಂಡರು, ಕಾಲ್ನಡಿಗೆಯ ಮೂಲಕ ನಗರದ ಟಿಬಿ ರಸ್ತೆಯ ಮಾರ್ಗವಾಗಿ ತಾಲ್ಲೂಕು ಕಛೇರಿಯವರೆಗೆ ಮೆರವಣಿಗೆ ನಡೆಸಿದರು.
ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿರುವಂತಹ ನಾಯಕರು, ಇಂತಹ ನಾಯಕರ ವಿರುದ್ದ ಸುಳ್ಳು ಆರೋಪಗಳು ನಾವು ಸಹಿಸುವುದಿಲ್ಲ. ರಾಜ್ಯಪಾಲರು ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಆಡಳಿತದಲ್ಲಿ ಶಶಿಕಲಾ ಜೊಲ್ಲೆ ಅವರ ವಿರುದ್ದ ಮೊಟ್ಟೆ ಹಗರಣದ ಆರೋಪ ಬಂದಾಗ ಪ್ರಾಸಿಕ್ಯೂಷನ್ ತನಿಖೆಗೆ ನೀಡಲಿಲ್ಲ. ಜೊತೆಗೆ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮುರಗೇಶ್ ನಿರಾಣಿ ಇಂತಹ ಹಲವು ನಾಯಕರ ವಿರುದ್ದದ ದೂರಗಳು ರಾಜ್ಯಪಾಲರ ಟೇಬಲ್ ಬಳಿ ಮೇಲೆ ಇವೆ. ಆದರೆ ಇಂತಹ ಪ್ರಕರಣಗಳು ಪ್ರಾಸಿಕ್ಯೂಷನ್ ಗೆ ನೀಡದೇ ಸಿದ್ದರಾಮಯ್ಯ ಅವರಿಗೆ ಸಂಬಂಧವಿಲ್ಲದ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡಲಾಗಿದೆ. ದೂರುದಾರರನ್ನು ರಾಜಭವನಕ್ಕೆ ಕರೆದು ರಾಜಾತೀತ್ಯ ನೀಡಲಾಗಿದೆ. ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದು, ಕಾನೂನಿನಲ್ಲಿ ಮೊದಲ ಹಂತದ ಜಯ ಸಿಕ್ಕಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಜಯ ಸಿಗುತ್ತದೆ ಎಂದರು.
ಸ್ಥಳೀಯ ಕಾಂಗ್ರೇಸ್ ನಾಯಕರ ನಡುವೆ ಭಿನ್ನಮತವಿಲ್ಲ: ಕಾಂಗ್ರೇಸ್ ಪಕ್ಷದ ಮುಖಂಡರೊಬ್ಬರು ಸೋಮವಾರದಂದು ತಾಲ್ಲೂಕಿನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವಿಚಾರವಾಗಿ ಕಾಂಗ್ರೇಸ್ ನಾಯಕರ ನಡುವೆ ಬಣ ರಾಜಕೀಯ ನಡೆಯುತ್ತಿದೆಯಾ? ಸ್ಥಳೀಯ ಕಾಂಗ್ರೇಸ್ ನಲ್ಲಿ ಭಿನ್ನಮತ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷದ ಅಧ್ಯಕ್ಷರು ಸೋಮವಾರದಂದು ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ಮಾಡುವಂತೆ ಆದೇಶ ನೀಡಿದ್ದರು. ಅದರಂತೆ ಕಾಂಗ್ರೇಸ್ ಪಕ್ಷದಿಂದ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದು, ಇಂದು ತಾಲ್ಲೂಕು ಮಟ್ಟದಲ್ಲಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ತಾಕೀತು ಮಾಡಿದ್ದರು. ಅದರಂತೆ ನಾವು ಜಿಲ್ಲಾ ಮಟ್ಟದಲ್ಲಿ ಬಾಗವಹಿಸಿದ್ದರಿಂದ ಮಂಗಳವಾರ ತಾಲ್ಲೂಕಿನಲ್ಲಿ ಮಾಡಿದ್ದೇವೆ. ನಿನ್ನೆ ಮಾಡಿರುವ ಪ್ರತಿಭಟನೆಗೆ ಸ್ವಾಗತಾರ್ಹ ಕಾಂಗ್ರೇಸ್ ಪಕ್ಷದಲ್ಲಿ ಸ್ಥಳೀಯ ನಾಯಕರ ನಡುವೆ ಯಾವುದೇ ಭಿನ್ನಮತ ಇಲ್ಲವೆಂದು ಸ್ಪಷ್ಟಪಡಿಸಿದರು.
ಸಂವಿಧಾನ ವಿರುದ್ದವಾಗಿ ನಡೆದುಕೊಂಡಿರುವ ರಾಜ್ಯಪಾಲರ ವಿರುದ್ದ ಕ್ರಮ ಕೈಗೊಂಡು ವಜಾಗೊಳಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿ. ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುಭ್ರಮಣಿ, ಕೆಎಂಎಫ್ ನಿರ್ದೇಶಕ ಶ್ರೀನಿವಾಸ ರಾಮಯ್ಯ, ಗುಡಿಹಳ್ಳಿ ಚಂದ್ರು, ಹಿತ್ತಲಹಳ್ಳಿ ಸುರೇಶ್ , ಬಸ್ ಮಂಜುನಾಥ್, ಗೌಡನಹಳ್ಳಿ ಮಂಜುನಾಥ್, ಸಾಧಿಕ್ ಪಾಷ, ಬೂದಾಳ ವರದರಾಜು, ಕುಂದಲಗುರ್ಕಿ ಮುನಿರೆಡ್ಡಿ, ರಮೇಶ್, ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಭಾಗವಹಿಸಿದ್ದರು.