ಸಿ-ಕ್ಯಾಂಪ್ ಸಹಯೋಗದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಜೊತೆ ಆರೋಗ್ಯ ಸಚಿವರ ಸಭೆ.
ಬೆಂಗಳೂರು : ಆರೋಗ್ಯ ಕ್ಷೇತ್ರಕ್ಕೆ ಕಾರ್ಪೋರೇಟ್ ಕಂಪನಿಗಳು ಸಿಎಸ್ ಆರ್ ಹಣ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು. ಬೆಂಗಳೂರಿನಲ್ಲಿ ಸೋಮವಾರದಂದು ಸಿ-ಕ್ಯಾಂಪ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಪೋರೇಟ್ ಕಂಪನಿಗಳ ಫೌಂಡೆಶನ್ಸ್ ರೌಂಡ್ ಟೇಬಲ್ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸಿ.ಎಸ್ ಆರ್ ಯೋಜನೆಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆ ತರಬಹುದು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದರು.
ಜನಸಾಮಾನ್ಯರ ಆರೋಗ್ಯ ಕಾಪಾಡುವತ್ತ ಹಲವು ಕಾರ್ಯಕ್ರಮಗಳನ್ನ ಇಲಾಖೆ ಹಮ್ಮಿಕೊಳ್ಳುತ್ತಿರುತ್ತದೆ. ವಿಶೇಷವಾಗಿ ರೋಗಗಳನ್ನ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಜನರ ಆರೋಗ್ಯ ರಕ್ಷಣೆಯತ್ತ ಹೆಚ್ವಿನ ಗಮನ ಹರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಗೃಹ ಆರೋಗ್ಯ ಯೋಜನೆಯನ್ನ ಜಾರಿಗೊಳಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಜನರ ತಪಾಸಣೆ ನಡೆಯಲಿದೆ. ಔಷಧಿಗಳು ಮನೆಬಾಗಿಲಿಗೆ ತಲುಪಲಿವೆ. ಈ ಯೋಜನೆಯಿಂದ ಸಾಕಷ್ಟು ಬದಲಾವಣೆಯನ್ನ ನಾವು ನಿರೀಕ್ಷಿಸುತ್ತಿದ್ದು, ಇಂಥಹ ದೊಡ್ಡ ಯೋಜನೆಯಲ್ಲಿ ಕಾರ್ಪೋರೇಟ್ ಕಂಪನಿಗಳು ಸಹ ಸಿಎಸ್ ಆರ್ ಮೂಲಕ ತಮ್ಮ ಸೇವೆ ಸಲ್ಲಿಸಬಹುದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಗೃಹ ಆರೋಗ್ಯ ಕಾರ್ಯಕ್ರಮದಲ್ಲಿ ಅಗತ್ಯ ತಂತ್ರಜ್ಞಾನ ಒದಗಿಸುವತ್ತು ಕಂಪನಿಗಳು ತಮ್ಮ ಸಿಎಸ್ ಆರ್ ಫಂಡ್ ವಿನಿಯೋಗಿಸಬಹುದು.
ಅಲ್ಲದೇ ಕೆಎಫ್.ಡಿ ಯಂಥಹ ರೋಗಗಳಿಗೆ ಇಂದು ವ್ಯಾಕ್ಸಿನ್ ತಯಾರಿಸುವ ಅಗತ್ಯತೆ ಇದೆ. ಕರ್ನಾಟಕದಲ್ಲಿ ಮಂಗನ ಕಾಯಿಲೆ ಹಾವಳಿ ಮೂರು ನಾಲ್ಕು ಜಿಲ್ಲೆಗಳಲ್ಲಿದೆ. ಕಾಯಿಲೆಗೆ ವ್ಯಾಕ್ಸಿನ್ ತಯಾರಿಸಬಹುದಾಗಿದ್ದು, ರಿಸರ್ಚ್ ವರ್ಕ್ ಗಳಿಗೆ ಸಿ.ಎಸ್ ಆರ್ ವಿನಿಯೋಗವಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಇನ್ಫೋಸಿಸ್ ಫೌಂಡೇಶನ್, ಯುಸೈಡ್, ಜಿ. ಇ. ಹೆಲ್ತ್ ಕೇರ್, ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್, ಅಸ್ಟ್ರಜೆನಕಾ, ಬಯೋಕಾನ್ ಫೌಂಡೇಶನ್, ಎಚ್ ಸಿ ಎಲ್ ಫೌಂಡೇಶನ್, ಇಂಟೆಲ್ ಕಾರ್ಪೊರೇಶನ್, ಯುನಿಸೆಫ್, ಮೈಕ್ರೋ ಲ್ಯಾಬ್, , ಅಂಥೆಮ್ ಬಯೋಸೈನ್ಸ್, ಸತ್ವ ಕನ್ಸಲಿಂಗ್, ವೋಲ್ಲೋ ಗ್ರೂಪ್ ಇಂಡಿಯಾ, ಆಶ್ರಯ ಹಸ್ತ ಟ್ರಸ್ಟ್, ಜೆ ಎಸ್ ಡಬ್ಲ್ಯೂ ಫೌಂಡೇಶನ್, ಲಿವ್ ಲವ್ ಲಾಫ್ ಫೌಂಡೇಶನ್, ಸ್ವಾಸ್ತ್ ಅಲೈಯನ್ಸ್ – ಆಕ್ಸ್ ಫಾರ್ ಹೆಲ್ತ್, ಕೋಲ್ಲೇಟ್ ಪಾಮೋಲಿವ್, ಸೀಮೆನ್ಸ್ ಹೆಲ್ತಿನಿಯರ್ಸ್ ಮುಂತಾದ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.