ಟಿವಿ & ಮೊಬೈಲ್ ವೀಕ್ಷಣೆಯಿಂದ ಮಕ್ಕಳ ಕಣ್ಣಿನ ದೃಷ್ಠಿಯ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ಎಚ್ಚರ ವಹಿಸಬೇಕು.!
ಶಿಡ್ಲಘಟ್ಟ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಟಿವಿ ಹಾಗೂ ಮೊಬೈಲ್ ವೀಕ್ಷಣೆಯ ಪರಿಣಾಮ ಕಣ್ಣಿನ ದೃಷ್ಠಿ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿವೆಯೆಂದು ಲಯನ್ಸ್ ಕ್ಲಬ್ ನ ವಲಯ ಅಧ್ಯಕ್ಷರಾದ ವಿ. ಅಜಯ್ ಕೀರ್ತಿ ತಿಳಿಸಿದರು.
ನಗರದ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ಗುರುವಾರ ಲಯನ್ಸ್ ಕ್ಲಬ್ ಹಾಗೂ ಅಲೋಕಜೀಸ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಕಣ್ಣು ತಪಾಸಣೆ ಶಿಬಿರ ಉದ್ಘಾಟಿಸಿಮಾತನಾಡಿದ ಅವರು, ಪೋಷಕರು ಮಕ್ಕಳ ಕಣ್ಣಿನ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಚಿಕ್ಕ ಮಕ್ಕಳಲ್ಲಿ ಕಣ್ಣಿನ ವಿವಿಧ ಸಮಸ್ಯೆಗಳಿದ್ದರೂ ಅದನ್ನು ಪೋಷಕರಿಗೆ ಹೇಳುವಷ್ಟು ಬುದ್ಧಿ ಮಕ್ಕಳಿಗೆ ಇರುವುದಿಲ್ಲ. ಆದ್ದರಿಂದ ಪೋಷಕರೇ ತಮ್ಮ ಮಕ್ಕಳ ಕಣ್ಣಿನ ಆರೋಗ್ಯ ತಪಾಸಣೆ ಆಗಾಗ ಮಾಡಿಸುವುದರಿಂದ ಪ್ರಾಥಮಿಕ ಹಂತದಲ್ಲಿ ಸಮಸ್ಯೆಗಳ ನಿವಾರಣೆ ಸಾಧ್ಯವಾಗುತ್ತದೆ. ಯಾವುದೇ ರೋಗವನ್ನು ಗಂಭೀರ ಸ್ವರೂಪ ತಲುಪಲು ಬಿಡದೇ ಮೊದಲ ಹಂತದಲ್ಲಿ ಪತ್ತೆ ಮಾಡಿ ಗುಣಪಡಿಸಲು ಸಾಧ್ಯವಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ವತಿಯಿಂದ ಸಮಾಜಕ್ಕೆ ಅವಶ್ಯಕತೆ ಇರುವ ಸೇವೆಗಳನ್ನು ಆದ್ಯತೆ ಮೇರೆಗೆ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ವಿಶೇಷವಾಗಿ ವಯೋ ವೃದ್ದರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ಛತ್ರಿಗಳನ್ನು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಜೊತೆಗೆ. ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹೊಲಿಗೆ ತರಬೇತಿ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ ಕಾರ್ಯ ನಡೆಸಲಾಗುತ್ತಿದೆ. ವಿಶೇಷವಾಗಿ ದೃಷ್ಠಿ ದೋಷ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ಕಣ್ಣಿನ ಚಿಕಿತ್ಸೆ ಕೊಡಿಸಲು ಶಾಲಾ ಹಂತದಲ್ಲಿ ಈ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ತಾಲ್ಲೂಕು ಅಧ್ಯಕ್ಷ ಎನ್.ಮನೋಹರ್, ಉಪಾಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ನಾರಾಯಣಸ್ವಾಮಿ ಎಸ್, ಖಜಾಂಜಿ ಮೊಹಮದ್ ಅಮಾನುಲ್ಲಾ, ನಿರ್ದೇಶಕರಾದ ಮಂಜುನಾಥ್ ಎಸ್.ಎನ್., ಸರಸ್ವತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್. ಶ್ರೀಕಾಂತ್, ಎಸ್. ವಿ. ರಘು, ಎಂ. ವೆಂಕಟರೆಡ್ಡಿ, ಜಿ. ಎಸ್. ಅನಂತಕೃಷ್ಣ ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.