ಬೆಂಗಳೂರು: ಬಿಡದಿ ಬಳಿಯ ನಿರ್ಜನ ಪ್ರದೇಶದಲ್ಲಿ ನಗರದ ಸಿಸಿಬಿಯ ಆರ್ಥಿಕ ಪತ್ತೆದಳ ವಿಭಾಗದ ಪೊಲೀಸ್ ಇನ್ ಪೆಕ್ಟರ್ ತಿಮ್ಮೇಗೌಡ ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸೋಮವಾರ ಮುಂಜಾನೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ತಿಮ್ಮೇಗೌಡ ಶವ ಕಂಡ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಬಿಡದಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡು ಪ್ರಕರಣ ದಾಖಲಿಸಿದ್ದಾರೆ.
ಚನ್ನಪಟ್ಟಣದ ಹಳ್ಳಿಯೊಂದರಿಂದ ಬಂದ 1998ರ ರೂರಲ್ ಬ್ಯಾಚ್ ಇನ್ಸ್ಪೆಕ್ಟರ್ ತಿಮ್ಮೇಗೌಡ ಗ್ರಾಮೀಣ ಕೃಪಾಂಕದಲ್ಲಿ ಆಯ್ಕೆಯಾಗಿದ್ದರು. ಚುನಾವಣೆ ವೇಳೆಗೆ ಬಿಡದಿಯಿಂದ ಅತ್ತಿಬೆಲೆಗೆ ವರ್ಗಾವಣೆಯಾಗಿದ್ದರು. 2023ರ ಸೆಪ್ಟೆಂಬರ್ನಲ್ಲಿ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ನಡೆದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಅವರನ್ನು ಬಳಿಕ ನಂತರ ಕುಂಬಳಗೋಡು ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಂದ ಒಂದು ತಿಂಗಳ ಹಿಂದೆಷ್ಟೇ ಸಿಸಿಬಿಗೆ ವರ್ಗಾವಣೆಗೊಂಡಿದ್ದರು.
ಸ್ಥಳದಲ್ಲಿ ಸದ್ಯ ಯಾವುದೇ ಮರಣಪತ್ರ ದೊರೆತಿಲ್ಲ. ಲೋಕಾಯುಕ್ತದಲ್ಲಿ ತಿಮ್ಮೇಗೌಡ ಅವರ ವಿರುದ್ಧ ಇತ್ತೀಚೆಗೆ ಪ್ರಕರಣವೊಂದು ದಾಖಲಾಗಿತ್ತು. ಅಲ್ಲದೇ ಅತ್ತಿಬೆಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ತಿಮ್ಮೇಗೌಡ ಅವರು ಅಮಾನತುಗೊಂಡಿದ್ದರು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಿಮ್ಮೇಗೌಡ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ತನಿಖೆಯ ಬಳಿಕ ತಿಳಿದು ಬರಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್ ಅಧಿಕಾರಿ ಅನುಮಾನಸ್ಪದವಾಗಿ ಸಾವು ಸಂಭವಿಸಿದೆ.