ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಪ್ರಕ್ಷುಬ್ಧತೆಗೆ ಹೆದರಿದ ಶೇಕ್ ಹಸೀನಾ ಜೀವ ಭಯದಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿದೇಶಕ್ಕೆ ಪರಾರಿಯಾದ ನಂತರ ಸೇನೆಯು ಮಧ್ಯಂತರ ಸರ್ಕಾರವನ್ನು ಸ್ಥಾಪಿಸಲಿದೆ. ಅಸ್ಥಿರತೆ ಹಿನ್ನೆಲೆಯಲ್ಲಿ ದೇಶದಲ್ಲಿ ಮಧ್ಯಂತರ ಸರ್ಕಾರವನ್ನು ಸ್ಥಾಪಿಸಲಾಗುವುದು ಎಂದು ಅಲ್ಲಿನ ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ತಿಳಿಸಿದ್ದಾರೆ.
ರಾಜೀನಾಮೆಗೆ ಒತ್ತಡ ಹೆಚ್ಚಾದ ನಂತರ ಶೇಕ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ದೇಶದಿಂದ ಪರಾರಿಯಾಗಿದ್ದಾರೆ. ಢಾಕಾ ತೊರೆದ ನಂತರ ಅವರು ಸಿ -130 ಸೇನಾ ವಿಮಾನದಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದು ಆಶ್ರಯ ಪಡೆದಿದ್ದಾರೆ.
ಭಾರತೀಯ ವಾಯುಪಡೆಯ ಸಿ-17 ಮತ್ತು ಸಿ-130ಜೆ ಸೂಪರ್ ಹರ್ಕುಲಸ್ ವಿಮಾನ ಹ್ಯಾಂಗರ್‌ಗಳ ಬಳಿ ಅವರ ವಿಮಾನವನ್ನು ನಿಲ್ಲಿಸಲಾಗುತ್ತದೆ. ಆ ವಿಮಾನ ಭಾರತೀಯ ವಾಯುಪ್ರದೇಶದ ಪ್ರವೇಶದಿಂದ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬರುವವರೆಗೂ ಭಾರತೀಯ ವಾಯುಪಡೆ ಮತ್ತು ಭದ್ರತಾ ಏಜೆನ್ಸಿಗಳು ಮೇಲ್ವಿಚಾರಣೆ ಮಾಡಿವೆ ಎಂದು ಮೂಲಗಳಿಂದ ತಿಳಿದುಬಂದಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ, ವಾಕರ್-ಉಜ್-ಝಮಾನ್, ಶಾಂತಿ ಸುವ್ಯವಸ್ಥೆ ಕಾಪಾಡಲು ಜನತೆಗೆ ಕರೆ ನೀಡಿದರು.