ಚಿಕ್ಕಬಳ್ಳಾಪುರ : ಚಿಂತಾಮಣಿ ತಾಲ್ಲೂಕಿನ ಕೈವಾರದ ಮನೆಯೊಂದರಲ್ಲಿ ಯಾರೂ ಇಲ್ಲದೆ ಇರುವ ಸಮಯವನ್ನ ನೋಡಿಕೊಂಡು ಒಂಟಿ ಮಹಿಳೆಯ ಮೇಲೆ ದಾಳಿ ಮಾಡಿ ಕತ್ತು ಕೊಯ್ದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.
ಇಂದು ಸೋಮವಾರ ಮದ್ಯಾಹ್ನ ಸಮಯ ಸುಮಾರು 12 ರಿಂದ 1:00 ಗಂಟೆ ವೇಳೆಯಲ್ಲಿ ಕೈವಾರದ ಸರ್ಕಾರಿ ಶಾಲೆಯ ಸಮೀಪದ ಮನೆಯೊಂದರಲ್ಲಿ ಲಲಿತಮ್ಮ (67 ವರ್ಷ) ಎಂಬ ವೃದ್ದೆಯ ಕುತ್ತಿಗೆ ಕೊಯ್ದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನ ಕಿತ್ತುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ನಿವೃತ್ತ ಸೆಕ್ರೆಟರಿ ದಿವಂಗತ ಗೋವಿಂದಪ್ಪ ಅವರ ಪತ್ನಿ ಲಲಿತಮ್ಮ ಕೊಲೆಯಾದ ಮಹಿಳೆಯಾಗಿದ್ದು, ಮೃತರ ಮಗ ಅಮರೇಂದ್ರ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿ ಕಂದಾಯ ನಿರೀಕ್ಷಕರಾಗಿದ್ದು, ಮೃತ ಲಲಿತಮ್ಮ ಅವರ ಸೊಸೆ ಮನೆಗೆ ಮದ್ಯಾಹ್ನ ಶಾಲೆಯಿಂದ ಬಂದಾಗ ಅತ್ತೆ ಕೊಲೆಯಾಗಿರುವುದು ಕಂಡುಬಂದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಹಾಗೂ ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಅವರು ಘಟನಾ ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿದರು.
ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಪ್ರಕರಣವನ್ನ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನ ರಚಿಸಿ ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚುವ ತಜ್ಞರು ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದ್ದು ಪೊಲೀಸರು ತನಿಖೆಯನ್ನ ಕೈಗೊಂಡಿದ್ದಾರೆ. ಅಂತೂ ಹಾಡ ಹಗಲೇ ಮನೆಗೆ ನುಗ್ಗಿ ಒಂಟಿ ಮಹಿಳೆಯ ಕೊಲೆ ಮಾಡಿದ್ದು ಇದರಿಂದ ಜನ ಬೆಚ್ಚಿಬಿದ್ದಿದ್ದಾರೆ. ಇದು ಸರಳಗಳ್ಳರ ಕೃತ್ಯವೋ ಅಥವಾ ಅನ್ಯ ಉದ್ದೇಶಕ್ಕೆ ಕೊಲೆ ಮಾಡಲಾಗಿದೆಯೋ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ.