ರಾಜ್ಯಪಾಲರ ನೋಟೀಸು: ಕಾನೂನುಬಾಹಿರ, ಸಂವಿಧಾನ ವಿರೋಧಿ.! ಚುನಾಯಿತ ಸರ್ಕಾರದ ಅಸ್ಥಿರಕ್ಕೆ ಕೇಂದ್ರ ಸರ್ಕಾರದ ಪ್ರಯತ್ನ.!
ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಶೋಕಾಸ್ ನೊಟೀಸ್ ಜಾರಿ ಮಾಡಿರುವ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೋಟೀಸು ಕೊಟ್ಟಿರುವುದು ಕಾನೂನುಬಾಹಿರ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸರ್ಕಾರವನ್ನು ಚುನಾಯಿತ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಶೋಕಾಸ್ ನೋಟಿಸ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿ, ನೋಟೀಸು ನೀಡಿರುವುದು ಕಾನೂನು ಬಾಹಿರವಾಗಿದ್ದು, ಅದನ್ನು ಹಿಂಪಡೆಯಬೇಕೆಂದು ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದರು.
ಆತುರವಾಗಿ ಶೋಕಾಸ್ ನೋಟೀಸ್ ರವಾನೆ: ಅಂದೇ ನೋಟೀಸು ನೀಡಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಪ್ರಭು ಶಂಕರ್ ಎಂಬುವರು ಕರೆ ಮಾಡಿ ಶೋಕಾಸ್ ನೋಟಿಸ್ ಸಿದ್ದವಿದೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ರಾತ್ರಿಯಾಗಿರುವುದರಿಂದ ಅದನ್ನು ಪಡೆಯಲಾಗಲಿಲ್ಲ. ಮಾರನೇ ದಿನ 2 ಗಂಟೆಗೆ ನೋಟೀಸನ್ನು ಆತುರವಾಗಿ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಯಾವುದೇ ಅಪರಾಧ ಮಾಡಿಲ್ಲ: ಅಬ್ರಹಾಂ ಒಬ್ಬ ಬ್ಲಾಕ್ ಮೈಲರ್. ಆತನ ದೂರಿನ ಮೇಲೆ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರವಾದ ವಿಚಾರ. ಆತ ಈ ರೀತಿ ಅನೇಕ ಜನರ ಮೇಲೆ ದೂರುಗಳನ್ನು ನೀಡಿದ್ದಾರೆ. ನಾನು ಯಾವುದೇ ಅಪರಾಧವನ್ನು ಮಾಡಿಲ್ಲ. ದಿನಾಂಕ : 26-7.2024 ರಂದು 11.30 ಗೆ ದೂರು ನೀಡಿದ್ದು, ಅಂದೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಒಂದೇ ದಿನದಲ್ಲಿ ಕಾನೂನು ವಿಷಯವನ್ನು ಒಳಗೊಂಡ ವಿಚಾರವನ್ನು, 136 ಜನ ಶಾಸಕರನ್ನು ಜನ ಆಶೀರ್ವಾದ ಮಾಡಿ ಕಳಿಸಿರುವ ಚುನಾಯಿತ ಸರ್ಕಾರದ ಮುಖ್ಯಮಂತ್ರಿಗೆ ನೋಟೀಸು ಕೊಡುವಾಗ ಎಲ್ಲಾ ಕಾನೂನನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಏನು ನೋಡದೇ ಆತುರವಾಗಿ ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಹಿಂದಿನ ಸರ್ಕಾರದ ಸಚಿವರ ಮೇಲೆ ಯಾಕೆ ಕ್ರಮವಿಲ್ಲ: ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ್ ರೆಡ್ಡಿಯವರ ಮೇಲೆ ವರ್ಷಗಟ್ಟಲೇ ದೂರುಗಳಿವೆ. ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಏನೂ ಇಲ್ಲದೆ ಅನಗತ್ಯವಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು. ಆರ್.ಅಶೋಕಗೇ ಹೆದರಿಕೆ ರಾಜ್ಯಪಾಲರು ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹೆದರಿದ್ದಾರೆ ಎಂಬ ವಿಪಕ್ಷ ನಾಯಕ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ತಪ್ಪು ಮಾಡಿದ್ದರೆ ಹೆದರಬೇಕು. ನಾನು ತಪ್ಪು ಮಾಡಿಲ್ಲ. ನನಗೆ ಯಾಕೆ
ಹೆದರಿಕೆಯಾಗಬೇಕು. ಅಶೋಕ್ ಅವರು ಹೆದರಿರಬಹುದು ಎಂದು ಹೇಳಿದರು.