300 ಕ್ಕೂ ಹೆಚ್ಚು ಬಲಿ ಪಡೆದ ಮಹಾಮಳೆ, ಸೇನೆಯಿಂದ ರಾತ್ರೋ ರಾತ್ರಿ ನಿರ್ಮಾಣವಾಯ್ತು ಸೇತುವೆ.!
ವಯನಾಡು: ಕೇರಳದ ಸಣ್ಣ ರಾಜ್ಯವನ್ನು ದೇವರ ನಾಡು ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ, ಇಲ್ಲಿ ಇರುವ ಅನೇಕ ದೇವಾಲಯಗಳು ಮತ್ತು ಪ್ರಕೃತಿ. ಇಲ್ಲಿ ಸಸ್ಯಶ್ಯಾಮಲೆ ತನ್ನೆಲ್ಲಾ ಸೌಂದರ್ಯವನ್ನು ಹರಡಿದೆ. ಪ್ರವಾಸಿಗರ ಸ್ವರ್ಗವಾಗಿದ್ದ ವಯನಾಡು ಈಗ ಸ್ಮಶಾನವಾಗಿ ಬದಲಾಗಿದೆ. ಭೀಕರ ಮಳೆಯಿಂದ ಸತ್ತವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಇದುವರೆಗೆ 300ಕ್ಕೂ ಹೆಚ್ಚು ಮಂದಿ ಮಳೆಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಎಷ್ಟು ಜನ ಇನ್ನೂ ಮಣ್ಣಿನ ಅಡಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದು ದೇವರೆ ಬಲ್ಲ.
ಮತ್ತಷ್ಟು ಮಾಹಿತಿ ಪ್ರಕಾರ, ಮಣ್ಣಿನ ಅವಶೇಷಗಳಡಿ 250ಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಭಾರಿ ಹವಾಮಾನ ವೈಪರಿತ್ಯಗಳ ನಡುವೆಯೂ ಸೇನೆ ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ತಮ್ಮ ಶೋಧ ಕಾರ್ಯವನ್ನು ನಿಲ್ಲಿಸದೇ ಮುಂದುವರಿಸುತ್ತಿವೆ. ಮಳೆ, ಗಾಳಿ, ಚಳಿ ಇವೆಲ್ಲವನ್ನು ತಡೆದು ಸಂಬಂಧಿಕರಿಗಾಗಿ ಕಾರ್ಯ ನಿರತರಾಗಿದ್ದಾರೆ. ಜೆಸಿಬಿಗಳ ಶಬ್ದ ಎಲ್ಲೆಂದರಲ್ಲಿ ಕೇಳಿಸುತ್ತಿದೆ, 10-12 ಜೆಸಿಬಿಗಳು ನದಿ, ಮಣ್ಣು, ಕಲ್ಲು, ಗುಡ್ಡ ಎಲ್ಲೆಡೆ ಕಾರ್ಯಾಚರಿಸುತ್ತಿವೆ. ನಾಯಿಗಳು ಕೂಡ ಶೋಧ ಕಾರ್ಯದಲ್ಲಿ ತೊಡಗಿವೆ. ಚಲಿಯಾರ್ ನದಿ ಪ್ರವಾಹ ತಕ್ಕ ಮಟ್ಟಿಗೆ ತಹಬದಿಗೆ ಬಂದಿದ್ದು, ತಾತ್ಕಾಲಿಕವಾಗಿ ಸೇನೆ ನಿರ್ಮಿಸಿದ ಸೇತುವೆ ಇದೀಗ ಪ್ರಯೋಜನಕ್ಕೆ ಬಂದಿದೆ.
ಪ್ರವಾಹ, ಭೂಕುಸಿತ, ಭೂಕಂಪದಂತಹ ಪರಿಸ್ಥಿತಿಯಲ್ಲಿ ಮೂಲಭೂತ ಸೌಕರ್ಯವಾದ ರಸ್ತೆ ಮತ್ತು ಸೇತುವೆಗಳು ಹೆಚ್ಚು ಹಾನಿಯಾಗುತ್ತವೆ. ಈ ಸಂದರ್ಭಗಳಲ್ಲಿ ನೆರವಿಗೆ ಬರುವುದೇ ಸೇನೆ. ವಯನಾಡಿನಲ್ಲೂ ರಕ್ಷಣಾ ತಂಡಗಳು ರಾತ್ರಿ ಹಗಲು ಶ್ರಮಿಸಿ ನದಿಗೆ ಅಡ್ಡಲಾಗಿ ಎರಡು ಕಬ್ಬಿಣದ ಸೇತುವೆಗಳನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿವೆ.
ಇದರ ಮೂಲಕ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ ಮತ್ತು ಸದ್ಯಕ್ಕೆ ನಿಲ್ಲಿಸುವ ಪರಿಸ್ಥಿತಿಯಲ್ಲಿಲ್ಲ. ಇನ್ನೂ ಕನಿಷ್ಠ 15 ರಿಂದ 20 ದಿನಗಳವರೆಗೆ ಈ ಕಾರ್ಯಾಚರಣೆ ಮುಂದುವರಿಯಬೇಕಾಗಿದೆ. ನೂರಾರು ಸಾವುಗಳು ಸಂಭವಿಸಿರುವುದರಿಂದ ಹೆಚ್1ಎನ್1 ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹೀಗಾಗಿ ದುರಂತ ಸ್ಥಳದಲ್ಲಿ, ಆಸ್ಪತ್ರೆ ಆವರಣದಲ್ಲಿ ಮತ್ತು ಸಂತ್ರಸ್ತರ ಕೇಂದ್ರಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ.
ವರದಿ: ಅಮೃತ್ ಕುಮಾರ್