ಶಿಡ್ಲಘಟ್ಟ : ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀಮತಿ ಹೇಮಾವತಿ ಅವರು ಅಧಿಕಾರವನ್ನ ವಹಿಸಿಕೊಂಡಿದ್ದಾರೆ.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರದಂದು ಇಲಾಖೆಯ ಸಿಬ್ಬಂದಿ ಹಾಗೂ ಪಿಡಿಓಗಳೊಂದಿಗೆ ಸಭೆ ನಡೆಸಿದರು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಎನ್ ಸುಬ್ಬಾರೆಡ್ಡಿ ಅವರ ನೇತೃತ್ವದಲ್ಲಿ ನೂತನ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಅವರಿಗೆ ಹೂ ಗುಚ್ಚ ನೀಡಿ ಶಾಲು ಹೊದಿಸಿ ಅಭಿನಂಧಿಸುವ ಮೂಲಕ ಸ್ವಾಗತ ಕೋರಿದರು. ನೌಕರರು ತಿಂಗಳು ಪೂರ್ತಿ ಕೆಲಸ ಮಾಡಿ ಸಂಬಳಕ್ಕಾಗಿ ಇಡೀ ಕುಟುಂಬ ಕಾಯುತ್ತಿರುತ್ತದೆ. ಕುಟುಂಬ ನಿರ್ವಹಣೆ, ಮಕ್ಕಳ ಶಾಲಾ ಕಾಲೇಜು ಶುಲ್ಕ ಕಟ್ಟುವುದಕ್ಕೆ ನೌಕರರ ವೇತನ ವಿಳಂಭವಾಗದಂತೆ ತ್ವರಿತವಾಗಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಮಾತನಾಡಿ ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಖಾಸಗಿ ವ್ಯವಸ್ಥೆಗೂ ಸರ್ಕಾರಿ ವ್ಯವಸ್ಥೆ ತುಂಬಾ ವ್ಯತ್ಯಾಸವಿದೆ. ಸರ್ಕಾರಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಪಡಬೇಕು ನಾವು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಡಿ ಗ್ರೂಪ್ ನೌಕರರಿಂದ ಇಲಾಖೆ ಸಿಬ್ಬಂದಿ, ಶಿಕ್ಷಕರು, ಸರ್ಕಾರಿ ನೌಕರರು ಪ್ರತಿ ತಿಂಗಳು 1 ರಿಂದ 5 ನೇ ತಾರೀಖಿನೊಳಗೆ ಸಂಬಳಕ್ಕಾಗಿ ಕಾಯುತ್ತಾರೆ. ನನ್ನ ಅವಧಿಯಲ್ಲಿ ವೇತನ ವಿಳಂಭವಾಗದಂತೆ ನೋಡಿಕೊಳ್ಳುತ್ತೇನೆ. ಶಿಡ್ಲಘಟ್ಟ ತಾಲ್ಲೂಕಿಗೆ ಬರುವುದಕ್ಕೆ ಹಲವರು ಪ್ರಯತ್ನ ಮಾಡಿದರು. ನನಗೆ ತಾಲ್ಲೂಕಿನಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಎಲ್ಲರೂ ಸಕಾರಾತ್ಮಕವಾಗಿ ಉತ್ಸಾಹದಿಂದ ಕೆಲಸ ಮಾಡಬೇಕು. ಯಾವುದೇ ದೂರು ದುಮ್ಮಾನಗಳು ಬರದಂತೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ ನನ್ನ ಸಹಕಾರ ಇರುತ್ತದೆ ಎಂದು ಹೇಳಿದರು.
ಒಂದೇ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್, ಗ್ರೇಡ್ -2 ಕಾರ್ಯದರ್ಶಿ, ಗ್ರೇಡ್ -1 ಕಾರ್ಯದರ್ಶಿ, ಪಿಡಿಓ ಆಗಿ ಹಲವು ವರ್ಷಗಳಿಂದ ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಸಾದಲಿ ಗ್ರಾಮ ಪಂಚಾಯಿತಿ ಪಿ.ಡಿ.ಓ ನಾರಾಯಣಮೂರ್ತಿ ಅವರನ್ನ ಸನ್ಮಾನಿಸಿ ಬಿಳ್ಗೊಡುಗೆ ನೀಡಲಾಯಿತು.
ನೂತನ ಇ.ಓ ಹೇಮಾವತಿ ಅವರ ಪ್ರಥಮ ಬೇಟಿ ಹಾಗೂ ಪ್ರತಿಕ್ರಿಯೆಗಾಗಿ ಸುದ್ದಿಗಾರರು ಕಾಯುತ್ತಿದ್ದರು. ಆದರೆ ಹೇಮಾವತಿ ಅವರು ಮಾತ್ರ ಸುದ್ದಿಗಾರರನ್ನ ಮಾತನಾಡಿಸುವುದೇ ಮರೆತು ಪ್ರಥಮ ದಿನವಾದ ಇಂದು ಇ.ಓ ಹೇಮಾವತಿ ಅವರು ಕಛೇರಿಯ ಸಿಬ್ಬಂದಿ, ಪಿಡಿಓ ಗಳೊಂದಿಗೆ ಮಾತನಾಡುವಲ್ಲಿ ತುಂಬಾ ಬ್ಯೂಸಿಯಾಗಿದ್ದರು.!
ಈ ಸಭೆಯಲ್ಲಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಕೆ.ಎನ್ ಸುಬ್ಬಾರೆಡ್ಡಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಸೇರಿಂದತೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಛೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.