ಶಿಡ್ಲಘಟ್ಟ : ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ, ಆದರ್ಶ ಗುಣಗಳು ನಮಗೆಲ್ಲರಿಗೂ ಮಾರ್ಗದರ್ಶನವಾಗಬೇಕು ಶಿಕ್ಷಣ, ಸಂಘಟನೆ, ಹೋರಾಟ ನಮಗೆಲ್ಲಾಸ್ಫೂರ್ತಿಯಾಗಿದ್ದು, ಭಾರತ ಮುಂದುವರೆಯುತ್ತಿರುವ ರಾಷ್ಟ್ರವಾಗಿದೆ. ಇದು ಅಂಬೇಡ್ಕರ್ ಅವರ ದೂರ ದೃಷ್ಟಿ ಚಿಂತನೆಯ ಫಲವಾಗಿದೆ. ನಮ್ಮ ದೇಶವು ಸದಾ ಕಾಲ ಅವರನ್ನು ಸ್ಮರಿಸುತ್ತದೆ. ಭಾರತದ ಪ್ರತಿಯೊಬ್ಬ ನಾಗರೀಕ ಜೀವನ ರೂಪಿಸುವಲ್ಲಿ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸೆ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ಶ್ರೀ ಪೂಜಮ್ಮದೇವಿ ಸೇವಾ ಯುವಕರ ಸಂಘ ಹಾಗೂ ಚಿಕ್ಕದಾಸರಹಳ್ಳಿ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಧರ್ಮಕ್ಕೆ ಸೇರಿದವರಲ್ಲ, ಅವರು ಎಲ್ಲಾ ಜಾತಿ ಜನಾಂಗದ ಅಸ್ತಿಯಾಗಿದ್ದು, ಎಲ್ಲರೂ ಶಾಂತಿ ಸಹೋದರತೆ ಹಾಗೂ ಸಮಾನತೆಯಿಂದ ಬಾಳಬೇಕೆಂಬ ನಿಟ್ಟಿನಲ್ಲಿ ಸಂವಿಧಾನ ರಚನೆ ಮಾಡಿದ್ದು, ಇಂದಿನ ಯುವ ಜನತೆ ಅಂಬೇಡ್ಕರ್ ರವರ ತತ್ವ ಸಿದ್ದಾಂತ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಅಂಬೇಡ್ಕರ್ ರವರ ಹಾದಿಯಲ್ಲೇ ನಡೆಯಬೇಕು ಎಂದರು.
ದ.ಸ.ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕೆ.ಸಿ ರಾಜಾಕಾಂತ್ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಹಲವಾರು ರೀತಿಯ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗಳನ್ನು ಅನುಭವಿಸಿ, ಶೋಷಣೆಗೆ ಒಳಗಾಗಿರುವ ದಲಿತರು, ಹಿಂದುಳಿದ ವರ್ಗ, ಹಾಗೂ ಅಲ್ಪಸಂಖ್ಯಾಂತರ ಉದ್ದಾರಕ್ಕಾಗಿ ಮತ್ತು ದಲಿತರಿಗೆ ಶಿಕ್ಷಣವನ್ನು ಒದಿಗಿಸಲು ಸಾಕಷ್ಟು ಶ್ರಮಿಸಿ ಸಂವಿಧಾನವನ್ನು ರಚನೆ ಮಾಡುವುದರ ಮೂಲಕ ದಲಿತರ ಬಾಳಿನಲ್ಲಿ ಬೆಳಕಾಗಿದ್ದಾರೆ. ಜನತೆ ಅಂಬೇಡ್ಕರ್ ರವರ ಪುತ್ಥಳಿನ್ನು ಸ್ಥಾಪನೆ ಮಾಡಿದರೆ ಸಾಲದು, ತಮ್ಮ ಮಕ್ಕಳಿಗೆ ಉತ್ತಮಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಸಮಾಜದಲ್ಲಿ ಉನ್ನತ ವ್ಯಕ್ತಿಗಳನ್ನಾಗಿ ಮಾಡಲು ಶ್ರಮಿಸಬೇಕು. ಚಿಕ್ಕದಾಸರಹಳ್ಳಿ ಗ್ರಾಮದ ಯುವಕರು ಒಗ್ಗಟಿನಿಂದ ಅಂಬೇಡ್ಕರ್ ರವರ ಪ್ರತಿಯನ್ನು ಸ್ಥಾಪನೆ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಸೇವಕ ಪುಟ್ಟು ಆಂಜಿನಪ್ಪ ಮಾತನಾಡಿ ಡಾ ಬಿ.ಆರ್.ಅಂಬೇಡ್ಕರ್ ಎಂಬುದು ಹೆಸರಲ್ಲ ಅದೊಂದು ಅಗಾಧವಾದ ಶಕ್ತಿ ಬಹುಮುಖ್ಯವಾಗಿ ಕಾನೂನಿನ ಶಕ್ತಿ.ದೇಶದ ಮಹಾನ ಶಕ್ತಿ ಅಂಬೇಡ್ಕರ್ ಆಗಿದ್ದರು. ವಿಶ್ವದ ಅತಿ ದೊಡ್ಡ ಸಂವಿಧಾನ ರಚಿಸುವ ಮೂಲಕ ಭಾರತೀಯರ ಬದುಕು ರೂಪಿಸಿದ ಮಹಾನ್ ನಾಯಕರಾಗಿದ್ದಾರೆ. ಅಂಬೇಡ್ಕರ್ ಅವರ ಸತತ ಪರಿಶ್ರಮದ ಪ್ರತಿಫಲವಾಗಿ ಸಂವಿಧಾನ
ರೂಪುಗೊಂಡಿದೆ. ದೀನ ದಲಿತರಿಗೆ ಬೆಳಕು ನೀಡುವ
ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ. ಹೀಗಾಗಿ ದೇಶದ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬ್ಯಾಟರಾಯಶೆಟ್ಟಿ ,ಜೆಡಿಎಸ್ ಮುಖಂಡ ಸಚಿನ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದ್ ಗೌಡ, ಕೆ ಎಂ ಎಫ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ , ಆರಕ್ಷಕ ವೃತ್ತ ನಿರೀಕ್ಷಕ ಎಂ.ಶ್ರೀನಿವಾಸ್, ಲಕ್ಷ್ಮೀ ವಿದ್ಯಾನಿಕೇತನ ಸಂಸ್ಥೆಯ ಮುಖ್ಯಸ್ಥರಾದ ಸ್ಕೂಲ್ ದೇವರಾಜ್, ತಾ.ಪಂ. ಮಾಜಿ ಅಧ್ಯಕ್ಷ ಎಂ ಕೆ ರಾಜ್ ಶೇಖರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶೈಲಜಾ , ಕಾರ್ಯದರ್ಶಿ ರಾಜಣ್ಣ , ನಿಕಟ ಪೂರ್ವ ಅಧ್ಯಕ್ಷ ಭಾಗ್ಯಮ್ಮ ಪಾಪಣ್ಣ , ಬಿಜೆಪಿ ಮುಖಂಡ ದಾಮದೋರ್, ದೇವರಾಜ್, ದಲಿತ ಯುವ ಮುಖಂಡರಾದ ಎನ್.ಎ.ವೆಂಕಟೇಶ್, ನಾಗ ನರಸಿಂಹ, ಕೆ.ರವಿಶಂಕರ್, ಕೆ.ನಾರಾಯಣಸ್ವಾಮಿ ಶ್ರೀ ಪೂಜಮ್ಮ ಸೇವಾ ಯುವಕರ ಸಂಘದ ಅಧ್ಯಕ್ಷ ದ್ಯಾವಪ್ಪ .ಬಿ ಹಾಗೂ ಯುವಕರು, ಗ್ರಾಮಸ್ಥರು ಹಾಜರಿದ್ದರು.