ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಅಭಿನಂದನೆ. ಶೂಟಿಂಗ್ ನಲ್ಲಿ ಪದಕ ಗೆದ್ದ ದೇಶದ ಮೊದಲ ಮಹಿಳಾ ಕ್ರೀಡಾಪಟು.
ಪ್ಯಾರಿಸ್: ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮಹಿಳಾ ಶೂಟರ್ ಹರಿಯಾಣದ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತ ಒಲಿಂಪಿಕ್ಸ್‌ನಲ್ಲಿ ಪದಕದ ಖಾತೆ ತೆರೆದ ಜೊತೆಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ 22 ವರ್ಷದ ಮನು ಭಾಕರ್ ಪಾತ್ರರಾಗಿದ್ದಾರೆ.
ಹನ್ನೆರಡು ವರ್ಷಗಳ ಬಳಿಕ ಭಾರತ ಒಲಿಂಪಿಕ್ಸ್‌ನ ಶೂಟಿಂಗ್ ವಿಭಾಗದಲ್ಲಿ ಪದಕ ಗೆದ್ದುಕೊಂಡಿದ್ದು, ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಮನು ಭಾಕರ್ ಪದಕ ಗೆದ್ದ ಐದನೇ ಶೂಟರ್ ಆಗಿದ್ದಾರೆ. ಮನು ಭಾಕರ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಫೈನಲ್ ನಲ್ಲಿ ಮೂರನೇ ಸ್ಥಾನ ಪಡೆದರು. ಮೂರು ವರ್ಷಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸರಣಿ ಆಘಾತಗಳನ್ನು ಮನು ಭಾಕರ್ ಎದುರಿಸಿ ಪ್ರತಿಭಾನ್ವಿತ ಶೂಟರ್ ಆಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಪ್ರಧಾನಿ ಮೋದಿ ಅಭಿನಂದನೆ ಕಂಚಿನ ಪದಕ ಗೆದ್ದು ಭಾರತದ ಮೆಡಲ್‌ಗಳ ಖಾತೆ ತೆರೆದ ಮನು ಭಾಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇದೊಂದು ಐತಿಹಾಸಿಕ ಸಂದರ್ಭ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಶೂಟಿಂಗ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದು ಇದು ವಿಶೇಷ ಯಶಸ್ಸು ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಹರಿಯಾಣದ ಮಗಳಿಂದ ಇಡೀ ದೇಶ ನಿರೀಕ್ಷಿಸುತ್ತಿದ್ದ ಪದಕದ ಭರವಸೆ ಈಡೇರಿದೆ ಎಂದು ಹೇಳಿದ್ದಾರೆ.
ದೇಶದ ಹೆಮ್ಮೆಯ ಮಹಿಳಾ ಶೂಟರ್ ಮನು ಭಾಕರ್ ಪ್ಯಾರಿಸ್‌ನಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ ಎಂದು ಸೈನಿ ಪೋಸ್ಟ್ ಮಾಡಿದ್ದಾರೆ. ಇದು ದೇಶ ಮತ್ತು ಹರಿಯಾಣ ರಾಜ್ಯವು ಹೆಮ್ಮೆಪಡುವಂತಹ ಸಾಧನೆ ಎಂದಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಮನು ಭಾಕರ್‌ಗೆ ಶುಭಾಶಯ ಕೋರಿ, ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೂಟಿಂಗ್‌ನಲ್ಲಿ 12 ವರ್ಷಗಳ ಪದಕಗಳ ಬರ ಕೊನೆಗೊಳಿಸಿದ್ದಾರೆ. ಈ ಸಾಧನೆಯೊಂದಿಗೆ ಮನು ಭಾಕರ್ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಭಾರತದ ಮೊದಲ ಪದಕ ಪಡೆದ ಮನು ಭಾಕರ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಏರ್ ಪಿಸ್ತೂಲ್ ಸ್ಪರ್ದೆಯಲ್ಲಿ ಹಿರಯಾಣದ ಮನು ಭಾಕರ್ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ.