ರಕ್ತ ಕೊಡ್ತೇವೆ, ಭೂಮಿ ಕೊಡಲ್ಲವೆಂದು ರೈತರ ಕೂಗು.!
ಶಿಡ್ಲಘಟ್ಟ : ರೈತರು ಭೂಮಿಯನ್ನೆ ನಂಬಿ ಫಲವತ್ತಾದ ಭೂಮಿಯಲ್ಲಿ ಬಂಗಾರದಂತಹ ಬೆಳೆಗಳು ಬೆಳೆಯುತ್ತಿರುವ ರೈತರ ಕೃಷಿ ಭೂಮಿಯನ್ನು ಕೆಐಎಡಿಬಿ ಕರ್ನಾಟಕ ಕೈಗಾರಿಕೆ ಪ್ತದೇಶ ಅಭಿವೃದ್ದಿ ಪ್ರಾಧಿಕಾರ ಭೂ ಸ್ವಾಧೀನ ಪ್ರಕ್ರಿಯೇ ಆರಂಭಿಸಿದೆ. ರೈತರ ಫಲವತ್ತಾದ ಕೃಷಿ ಭೂಮಿಯನ್ನು ಭೂ -ಸ್ವಾಧೀನದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ರೈತ ಸಂಘದಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ( ಸಾಮೂಹಿಕ ನಾಯಕತ್ವ) ರಾಜ್ಯ ಉಪಾಧ್ಯಕ್ಷರಾದ ಬೆಳ್ಳೂಟಿ ಮುನಿಕೆಂಪಣ್ಣ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ನೇತೃತ್ವದಲ್ಲಿ ರೈತರು ಸೇರಿ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಸರ್ಕಾರದ ವಿರುದ್ದ ಘೋಷಣೆಗಳು ಕೂಗಿ ಪ್ರತಿಭಟಿಸಿದರು.
ಪ್ರತಿಭಟನೆಯನ್ನ ಉದ್ದೇಶಿಸಿ ರಾಜ್ಯ ಉಪಾಧ್ಯಕ್ಷರಾದ ಬೆಳ್ಳೂಟಿ ಮುನಿಕೆಂಪಣ್ಣ ಮಾತನಾಡಿ ರೈತರಿಗೆ ಭೂಮಿಗಿಂತ, ಪರಿಹಾರದ ಹಣ ಮುಖ್ಯವಲ್ಲ, ಫಲವತ್ತಾದ ಕೃಷಿ ಭೂಮಿಯನ್ನು ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸಂಜೀವಪುರ, ತೊಟ್ಲಗಾನಹಳ್ಳಿ, ಅರಿಕೆರೆ, ಬಸವಾಪಟ್ಟಣ, ಚೊಕ್ಕಂಡಹಳ್ಳಿ, ಕೊಲಿಮಿಹೊಸೂರು, ಯಣ್ಣಂಗೂರು, ತಾದೂರು, ಯದ್ದಲತಿಪ್ಪೇನಹಳ್ಳಿ ಸೇರಿದಂತೆ ಈಭಾಗದ ಸುಮಾರು 14 ಹಳ್ಳಿಗಳಿಂದ ಸರಿಸುಮಾರು 1823 ಕ್ಕೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿ ಭೂ ಸ್ವಾಧೀನಕ್ಕೆ ಮುಂದಾಗಿದೆ. ಇದನ್ನು ಕೂಡಲೇ ಸರ್ಕಾರ ನಿಲ್ಲಿಸಬೇಕು. ರೈತರ ಭೂಮಿಯನ್ನೆ ನಂಬಿ ಜೀವನ ಮಾಡುತ್ತಿದ್ದಾರೆ. ಭೂಮಿಯ ಬದಲಿಗೆ ಸಿಗುವ ಹಣ ರೈತರ ಬಳಿ ಇರುವುದಿಲ್ಲ. ಫಲವತ್ತಾದ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಕೈಗಾರಿಕೆಗಳು ನಿರ್ಮಾಣವುದಕ್ಕಿಂತ ಬರಡು ಭೂಮಿಯನ್ನ ಗುರುತಿಸಿ ಕೈಗಾರಿಕೆಗಳು ನಿರ್ಮಸುವುದಕ್ಕೆ ನಮ್ಮ ತಕರಾರು ಇರುವುದಿಲ. ಆದರೆ ಫಲವತ್ತಾದ ಕೃಷಿ ಭೂಮಿಯನ್ನ ಮಾತ್ರ ಬಿಡುವುದಿಲ್ಲ. ಭೂಮಿಗಾಗಿ ರಕ್ತವನ್ನು ಕೊಡ್ತೇವೆ ಹೊರತು ಭೂಮಿ ಮಾತ್ರ ಬಿಡುವುದಿಲ್ಲ. ಸರ್ಕಾರ ಕೂಡಲೇ ರೈತರ ಕೃಷಿ ಭೂಮಿ ಭೂ ಸ್ವಾಧೀನಕ್ಕೆ ಪಡೆಯುವುದನ್ನ ನಿಲ್ಲಿಸಬೇಕು. ಇಲ್ಲವಾದಲ್ಲಿ ಬೃಹತ್ ಅಂದೋಲನ ನಡೆಸುವುದಾಗಿ ಎಚ್ಚರಿಸಿದರು.
ಭಕ್ತರಹಳ್ಳಿ ಪ್ರತೀಶ್ ಮಾತನಾಡಿ ಕೈಗಾರಿಕೆಗಳು ಬರಬೇಕು, ತಾಲ್ಲೂಕಿನ ಅನೇಕ ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗಗಳೂ ಸಿಗಬೇಕು ಇದಕ್ಕೆ ನಮ್ಮ ಬೆಂಬಲ ಸಹಕಾರವೂ ಕಂಡಿತವಾಗಿಯೂ ಇರುತ್ತದೆ. ಆದರೆ ರೈತರ ಫಲವತ್ತಾದ ಕೃಷಿ ಭೂಮಿಯನ್ನ ಸ್ವಾಧೀನಕ್ಕೆ ಪಡೆಯುವುದಕ್ಕೆ ನಮ್ಮ ವಿರೋಧವಿದೆ. ರೈತರು ಕೇವಲ ತಮಗಾಗಿ ಮಾತ್ರ ಬೆಳೆ ಬೆಳೆಯುವುದಿಲ್ಲ. ಇದನ್ನು ಅರ್ಥೈಸಿಕೊಳ್ಳಬೇಕು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಕೃಷಿ ಭೂಮಿಯನ್ನ ಕೆಐಎಡಿಬಿಗೆ ಭೂ -ಸ್ವಾಧೀನ ಆಗದಂತೆ ತಡೆಯಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರು ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಅರಿಕೆರೆ ಮುನಿರಾಜು ಅವರು ಮಾತನಾಡಿ ಈ ಭಾಗದ ರೈತರು ಕೆಂಪು ಭೂಮಿಯಲ್ಲಿ ಬಂಗಾರದಂತಹ ಬೆಳೆಗಳು ಬೆಳೆದು ಅದರಲ್ಲಿ ಸೂಪರ್ ಗ್ರೇಡ್ ಮಾಡಿ ಗುಣಮಟ್ಟದಲ್ಲಿ ವಿಂಗಡಿಸಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಉದ್ಯಮಿಗಳಿಗೆ ಮಾರುಕಟ್ಟೆಗಳ ಮೂಲಕ ನೀಡುತ್ತಿರುವುದರಿಂದಲೇ ಅವರೆಲ್ಲರೂ ಸೇರಿ ಫಲವತ್ತಾದ ಭೂಮಿಯ ಮೇಲೆ ಕಣ್ಣು ಹಾಕಿರುವುದು. ಇದನ್ನ ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕು. ರೈತ ಸಂಘಗಳಲ್ಲಿ ಬಣಗಳು ಬಿಟ್ಟು ನಾವೆಲ್ಲರೂ ಒಗಟ್ಟನಿಂದ ಹೋರಾಟ ಮಾಡಬೇಕು. ಉದ್ಯಮಿಗಳು ತಯಾರಿಸುವ ಪ್ರತಿಯೊಂದು ವಸ್ತುಗಳಿಗೆ ಕಂಪನಿಯಿಂದಲೇ ಬೆಲೆ ನಿಗಧಿಯಾಗಿ ಹೊರಗಡೆ ಬರುತ್ತದೆ. ಆದರೆ ರೈತರು ಬೆಳೆಯುವ ಬೆಳೆಗಳಿಗೆ ಇಂದಿಗೂ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ರೈತರು ಪಾಲಿಸಿ ಮೇಕರ್ಸ್ ಆಗಬೇಕು ಎಂದರು.
ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ ಸುಧಾಕರ್ ಮತ್ತು ಕೆಐಎಡಿಬಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮನವಿ ಪತ್ರವನ್ನು ಸ್ವೀಕರಿಸಿದ ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರು ಮಾತನಾಡಿ ತಾಲ್ಲೂಕಿಗೆ ಕೈಗಾರಿಕೆಗಳು ಬರುವುದರಿಂದ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ. ತಾಲ್ಲೂಕು ಸಹ ಅಭಿವೃದ್ದಿಯಾಗಲಿದೆ. ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೋಮಾ, ಪದವಿ ವ್ಯಾಸಂಗ ಮಾಡಿರುವ ಯುವಕ, ಯುವತಿಯರಿಗೆ ಉದ್ಯೋಗವಕಾಶಗಳು ಸಿಗಲಿದೆ. ಭೂ -ಸ್ವಾಧೀನ ಪ್ರಕ್ರಿಯೆಯ ಅಂತಿಮ ನಿರ್ಧಾರ ಸರ್ಕಾರ ಮಾಡಬೇಕಾಗುತ್ತದೆ. ರೈತ ಸಂಘದಿಂದ ನೀಡಿರುವ ಮನವಿಯನ್ನ ಸರ್ಕಾರಕ್ಕೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅದ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್ ಚಾರಿ, ಚಿಂತಾಮಣಿ ತಾಲೂಕು ಅದ್ಯಕ್ಷ ಎಚ್,ಎನ್,ಕದೀರೇಗೌಡ, ಕಾರ್ಯದರ್ಶಿ ಆಂಜಿನಪ್ಪ, ಉಪಾದ್ಯಕ್ಷ ಭೈರಗಾನಹಳ್ಳಿ ಬಿ.ವಿ,ಮಂಜುನಾದ್, ರೈತ ಮುಖಂಡರಾದ ಸುಂಡರಹಳ್ಳಿ ಕೆಂಪಣ್ಣ, ಬಾಲಮುರಳಿಗೌಡ,ಡಿ.ವಿ,ನಾರಾಯಣಸ್ವಾಮಿ, ಅರಿಕೆರೆ ಶ್ರೀನಿವಾಸ್, ತಾದೂರು ಮೂರ್ತಿ, ಕೊಲಮಿಹೊಸೂರು ಯೋಗಾನಂದ್, ಹೀರೆಬಲ್ಲ ಸುರೇಶ್, ಚೀಮಂಗಲ ಮುನಿರಾಜು, ಬಶೆಟ್ಟಹಳ್ಳಿ ಹೊಬಳಿ ಅದ್ಯಕ್ಷ ಆಂಜಿನಪ್ಪ,, ಗಂಗದಾರ್, ಹಾಗೂ ಇತರರು ಭಾಗವಹಿಸಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ