ನೂತನ ತಾಲ್ಲೂಕು ಅಧ್ಯಕ್ಷ ಪಟೇಲ್ ಟಿ. ನಾರಾಯಣಸ್ವಾಮಿ ಪದಗ್ರಹಣ ಸ್ವೀಕಾರ.
ಶಿಡ್ಲಘಟ್ಟ : ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನ ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರು ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ನೂತನ ಅಧ್ಯಕ್ಷರಾದ ಪಟೇಲ್ ಟಿ.ನಾರಾಯಣಸ್ವಾಮಿ ಅವರಿಗೆ ಕನ್ನಡ ಭಾವುಟ ಹಸ್ತಾಂತರಿಸಿ ಅಭಿನಂಧಿಸಿದರು.
ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು ಕನ್ನಡ, ನಾಡು ನುಡಿ ಜಲ, ಭಾಷೆ ವಿಚಾರವಾಗಿ ಹೆಚ್ಚಿನ ಕಾಳಜಿವಹಿಸಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಸೇವೆ ಮಾಡುತ್ತಿದೆ. ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಕನ್ನಡ ಪ್ರೇಮಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಸೇರಿದಂತೆ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು ತಿಳಿಸುತ್ತೇನೆ. ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಸಹಕಾರ ನೀಡುತ್ತಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡದ ಸೇವೆಗೆ ಸದಾ ನಮ್ಮ ಸಹಕಾರ ಬೆಂಬಲ ಇರುತ್ತದೆ ಎಂದರು.
ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪಟೇಲ್ ಟಿ. ನಾರಾಯಣಸ್ವಾಮಿ ಅವರು ಅಧಿಕಾರ ವಹಿಸಿಕೊಂಡಿದ್ದು ಜಿಲ್ಲಾಧ್ಯಕ್ಷರಾದ ಕೋಡಿರಂಗಪ್ಪ ಅವರ ಉಪಸ್ಥಿತಿಯಲ್ಲಿ ಪದಗ್ರಹಣ ಸ್ವೀಕರಿಸಿದರು.
ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ಅವರು ಮಾತನಾಡಿ ಕನ್ನಡದ ಭಾಷೆಗೆ ನಾವು ಆದ್ಯತೆ ನೀಡಬೇಕು ನೆರೆಯ ಆಂಧ್ರ ಪ್ರದೇಶ, ತಮೀಳುನಾಡು ರಾಜ್ಯಗಳು ಮಾತೃ ಭಾಷೆಗೆ ಹೆಚ್ಚು ಆದ್ಯತೆ ನೀಡುತ್ತವೆ. ಕನ್ನಡ ಭಾಷೆಗೆ ಬಹಳ ಇತಿಹಾಸವಿದೆ. ಕರ್ನಾಟಕ ರಾಜ್ಯದಲ್ಲಿ ಕನ್ನಡಕ್ಕಿಂತ ಹೆಚ್ಚು ಆಂಗ್ಲಭಾಷೆಯ ನಾಮಫಲಕಗಳು ಇರುತ್ತವೆ. ಮೊದಲು ನಮ್ಮ ಭಾಷೆಗೆ ನಾವು ಪ್ರಾಮುಖ್ಯತೆ ನೀಡಬೇಕು.ಈ ಕುರಿತು ಮುಂದಿನ ದಿನಗಳಲ್ಲಿ ನಾವು ಸಹಾ ಜಾಥಾ ನಡೆಸುತ್ತೇವೆ. ಸರ್ಕಾರ ಈಗಾಗಲೇ ಕನ್ನಡ ಭಾಷೆಯನ್ನ ಕಡ್ಡಾಯಗೊಳಿಸಿದೆ. ಪಾರ್ಲಿಮೆಂಟ್ ಗೆ ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸುಧಾಮೂರ್ತಿ ಅವರು ಮತ್ತು ನಮ್ಮ ಸಂಸದರು ಕನ್ನಡದಲ್ಲೆ ಪ್ರಮಾಣವಚನ ಸ್ವೀಕರಿಸಿರುವುದು ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಹೆಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಟ್ರಸ್ಟ್ ವತಿಯಿಂದ ಶಾಸಕ ಬಿ.ಎನ್ ರವಿಕುಮಾರ್ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಅಭಿನಂಧಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ನಿಕಟ ಪೂರ್ವ ತಾಲ್ಲೂಕು ಅಧ್ಯಕ್ಷರಾದ ಅನಂತಕೃಷ್ಣ, ಮಾಜಿ ಜಿಲ್ಲಾಧ್ಯಕ್ಷ ನಾಗರಾಜು, ಶಿವಶಂಕರ್, ರೈತ ಸಂಘದ ವೆಂಕಟಸ್ವಾಮಿ, ಬೆಳ್ಳೂಟಿ ಮುನಿಕೆಂಪಣ್ಣ, ವೀರಾಪುರ ಮುನಿನಂಜಪ್ಪ, ಶಾಸಕರ ಆಪ್ತರಾದ ತಾದೂರು ರಘು, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷರಾದ ನಾರಾಯಣಸ್ವಾಮಿ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ