ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ.
ನವದೆಹಲಿ: ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದು ರಾಜ್ಯಸಭೆಯಲ್ಲಿ ಪ್ರಕಟಿಸಿದರು.
ಭ್ರಷ್ಟಾಚಾರ ದಮನ ಮಾಡುವ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ಮೋದಿಯವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಪುನರುಚ್ಚರಿಸಿದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಪ್ರಧಾನಿ, ಭ್ರಷ್ಟರು ಮತ್ತು ಭ್ರಷ್ಟಾಚಾರದ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲು ತನಿಖಾ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ ಎಂದು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ. ಸರ್ಕಾರ ಎಲ್ಲಿಯೂ ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಹಿಂಜರಿಕೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಪಕ್ಷಗಳ ವಿರುದ್ಧ ವಾಗ್ದಾಳಿ ರಾಜ್ಯ ಸಭೆಯಲ್ಲೂ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, ನವೆಂಬರ್ 24 ರಂದು ನಾವು ಸಂವಿಧಾನ ದಿನ ಆಚರಿಸಲು ನಿರ್ಧರಿಸಿದಾಗ ಈಗ ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಿರುವವರು ಅದನ್ನು ವಿರೋಧಿಸಿದರು ಎಂದು ತಿರುಗೇಟು ನೀಡಿದರು. ಸಂವಿಧಾನದ ಕಾರಣದಿಂದ ನನಗೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿತು. ಸಂವಿಧಾನದ ಆಶಯ ನಮಗೆ ಅಮೂಲ್ಯ, ಸಂವಿಧಾನವು ನಮಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ನಮ್ಮ ಸರ್ಕಾರ 10 ವರ್ಷಗಳನ್ನು ಪೂರೈಸಿದೆ. ಇನ್ನೂ 20 ವರ್ಷ ಪೂರೈಸಬೇಕಿದೆ. ಕಳೆದ 10 ವರ್ಷಗಳಲ್ಲಿ ಸಮರ್ಪಣಾ ಮನೋಭಾವ ಮತ್ತು ನಿರಂತರ ಸೇವೆಯೊಂದಿಗೆ ಕೆಲಸವನ್ನು ಸಾರ್ವಜನಿಕರು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ ಎಂದರು. ಈ ವೇಳೆ ವಿರೋಧ ಪಕ್ಷಗಳು ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದವು. ಕಲಾಪ ಮುಂದೂಡಿ, ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿ ಸಭಾತ್ಯಾಗ ನಡೆಸಿದವು