ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಯೋಜನೆಗಳ ಅನುಮೋದನೆ ಕುರಿತು ಮನವಿ ಮಾಡಿದ್ದಾರೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಹಾಗೂ 400 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು ಆಣೆಕಟ್ಟು ಯೋಜನೆಯ 9000 ಕೋಟಿ ರೂ.ಗಳ ಡಿಪಿಆರ್ ಗೆ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಬಾಕಿ ಇದೆ.ಮೇಕೆದಾಟು ಯೋಜನೆಗೆ ಪ್ರಧಾನಿಗಳು ಖುದ್ದಾಗಿ ಆಸಕ್ತಿ ವಹಿಸುವಂತೆಯೂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023-2024 ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ಗಳ ಬಿಡುಗಡೆ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ಮಹಾದಾಯಿ ಯೋಜನೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ 60 ಕಿ.ಮೀ ಸುರಂಗ ಮಾರ್ಗಕ್ಕೆ 3000 ಕೋಟಿ ರೂ. ವೆಚ್ಚವಾಗಲಿದ್ದು, ಯೋಜನೆಯಿಂದ ಹಲವಾರು ಲಾಭಗಳಿವೆ. ಈ ಸುರಂಗ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ಅನ್ನು ರಾ.ಹೆ.4ಕ್ಕೆ ಸಂಪರ್ಕಿಸುವುದರಿಂದ ಕರ್ನಾಟಕ ಸರ್ಕಾರ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಕೈಗೊಳ್ಳಬಹುದಾಗಿದ್ದು, ಕೇಂದ್ರ ಬಜೆಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಎನ್.ಹೆಚ್.ಎ.ಐ ಗೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.
ಸಾರ್ವಜನಿಕ ಸಾರಿಗೆಗೆ ಬೇಡಿಕೆ ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ಮೆಟ್ರೋ 3 ನೇ ಹಂತದ 44.65 ಕಿಮೀ ಗಳನ್ನು 15611 ಕೋಟಿಗಳ ವೆಚ್ಚದ ಡಿಪಿಆರ್ ನ್ಯೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಆದಷ್ಟು ಶೀಘ್ರವಾಗಿ ಅನುಮೋದನೆ ನೀಡುವಂತೆ ಕೋರಿದ್ದಾರೆ.
15 ನೇ ಹಣಕಾಸು ಆಯೋಗವು 2021-26 ರ ಅವಧಿಗೆ ಕೆರೆಗಳ ಅಭಿವೃದ್ಧಿ ಹಾಗೂ ಪೆರಿಫೆರಲ್ ರಿಂಗ್ ರೋಡ್ ಗಾಗಿ ಶಿಫಾರಸ್ಸು ಮಾಡಿರುವ 6000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕದ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 3000 ಕೋಟಿ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದು ಕೇಂದ್ರ ಸರ್ಕಾರವು ತನ್ನ 2024-25ರ ಬಜೆಟ್‌ನಲ್ಲಿ ಅನುರೂಪದ ಅನುದಾನವನ್ನು ಒದಗಿಸಲು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮದಡಿ ಒದಗಿಸುವ ಅನುದಾನವನ್ನು ಹೆಚ್ಚಿಸಲು ಮತ್ತು ಹೊಸ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಧನಸಹಾಯ ನೀಡಲು ಕೋರಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಎಮ್ಸ್ ಅನ್ನೂ ಘೋಷಿಸುವಂತೆ ಮುಖ್ಯಮಂತ್ರಿ ತಮ್ಮ ಮನವಿ ಪತ್ರದಲ್ಲಿ ಕೋರಿದ್ದಾರೆ.
ಬಿಬಿಎಂಪಿ ವತಿಯಿಂದ ಘನ ತ್ಯಾಜ್ಯ ನಿರ್ವಹಣೆಗಾಗಿ 3200 ಕೋಟಿ ಅಂದಾಜು ಮೊತ್ತದ ಯೋಜನೆ ಕೈಗೊಳ್ಳುತ್ತಿದ್ದು, ಯೋಜನೆಯ ಶೇ.30% ಅಂದರೆ 960 ಕೋಟಿ ರೂ.ಗಳನ್ನು ಸ್ವಚ್ಛ ಭಾರತ ಅಭಿಯಾನ 2.0ದಡಿ ಕಾರ್ಯಸಾಧ್ಯಾತಾ ಅಂತರ ನಿಧಿ ಒದಗಿಸಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಉಪಸ್ಥಿತರಿದ್ದರು.