ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಗೆ ವಿಚಾರಣೆ ಕೋರ್ಟ್ ನೀಡಿದ್ದ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ಕೇಜ್ರಿವಾಲ್‌ಗೆ ಜೈಲುವಾಸ ಮುಂದುವರಿದಿದೆ. ದೆಹಲಿ ಹೈಕೋರ್ಟ್‌ನ ರಜಾ ಕಾಲದ ಏಕಸದಸ್ಯ ಪೀಠದಲ್ಲಿ ನಡೆದ ವಿಚಾರಣೆ ವೇಳೆ, ಪ್ರಕರಣ ಕುರಿತಂತೆ ನ್ಯಾಯಾಲಯದ ಮುಂದಿಟ್ಟ ಸಾಕ್ಷಗಳು ಮತ್ತು ವಾದದ ಕುರಿತಂತೆ ಜಾರಿ ನಿರ್ದೇಶನಾಲಯದ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದೆ.ಜಾಮೀನು ನೀಡುವ ಸಮಯದಲ್ಲಿ ವಿಚಾರಣಾ ನ್ಯಾಯಾಲಯ ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ನ್ಯಾಯಮೂರ್ತಿ ಸುಧೀಂದ್ರಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ವಾದ ಮಂಡಿಸಲು ವಿಚಾರಣಾ ನ್ಯಾಯಾಲಯ ಇಡಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕಾಗಿತ್ತು. ಆದ್ದರಿಂದ ದೋಷದಿಂದ ಕೂಡಿರುವ ಜಾಮೀನು ಆದೇಶಕ್ಕೆ ತಡೆ ನೀಡುತ್ತಿರುವುದಾಗಿ ತಿಳಿಸಿದರು. ಜೂ.20ರಂದು ಕೇಜ್ರವಾಲ್ ಗೆ ಜಾಮೀನು ನೀಡಿದ್ದ ನ್ಯಾಯಾಲಯ ಒಂದು ಲಕ್ಷ ವೈಯಕ್ತಿಕ ಬಾಂಡ್ ಪಡೆದು ಬಿಡುಗಡೆಗೆ ಆದೇಶ ಹೊರಡಿಸಿತ್ತು. ಜಾಮೀನು ತೀರ್ಪು ಪ್ರಕಟಗೊಂಡ ಬೆನ್ನಲ್ಲೇ, ಇಡಿ ಆಕ್ಷೇಪ ವ್ಯಕ್ತಪಡಿಸಿ ವಿಚಾರಣಾ ನ್ಯಾಯಾಲಯದ ಆದೇಶ ಏಕಪಕ್ಷೀಯ ಮತ್ತು ದೋಷದಿಂದ ಕೂಡಿದೆ. ನ್ಯಾಯಾಲಯದ ಆದೇಶ ಅಪ್ರಸ್ತುತ ಸತ್ಯಗಳನ್ನು ಆಧರಿಸಿವೆ ಎಂದು ವಾದಿಸಿತ್ತು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದರು. ಸಿಬಿಐ ತನಿಖೆಗೆ ಆದೇಶಿಸಿದ ನಂತರ ದೆಹಲಿ ಅಬಕಾರಿ ನೀತಿಯನ್ನು ರದ್ದುಪಡಿಸಿತ್ತು.
ದೆಹಲಿ ಸಿಎಂ ಅರವಿಂದ್ ಕೇಜ್ರವಾಲ್ ಅವರನ್ನು ಕಳೆದ ಮಾರ್ಚ್ 21ರಂದು ಇಡಿ ಬಂಧಿಸಿತ್ತು. ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 2 ರಂದು ಅವರು ಪುನಃ ಶರಣಾಗಿದ್ದರು.