ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿತ್ತು. ಭಾನುವಾರ 42ನೇ ಎಸಿಎಂಎಂ ಕೋರ್ಟ್ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸೋಮವಾರ ಸೂರಜ್ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ವೇಳೆ ಸೂರಜ್ ಅವರನ್ನು ವಿಚಾರಣೆಗೆ ಒಳಪಡಿಸಲು 14 ದಿನ ನ್ಯಾಯಾಂಗ ಬಂಧನಕ್ಕೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು. ಈ ಮನವಿಗೆ ಒಪ್ಪದ ನ್ಯಾಯಾಧೀಶರು ಎಂಟು ದಿನ ಕಸ್ಟಡಿಗೆ ನೀಡಲು ಒಪ್ಪಿದರು. ಜುಲೈ ಒಂದು ಸಂಜೆ 4 ಗಂಟೆಗೆ ಸೂರಜ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದರು. ಸಂತ್ರಸ್ತನ ವಿರುದ್ಧ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಸೂರಜ್ ರೇವಣ್ಣ ಶನಿವಾರ ಸಂಜೆ ಹಾಸನದ ಸೆನ್ ಠಾಣೆಗೆ ತೆರಳಿದ್ದರು. ಈ ವೇಳೆ ಸೂರಜ್ ರೇವಣ್ಣರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು ಮುಂಜಾನೆಯವರೆಗೂ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಭಾನುವಾರ ಬೆಳಗ್ಗೆ ಸೂರಜ್‌ರನ್ನು ಅಧಿಕೃತವಾಗಿ ಬಂಧಿಸಿದ್ದರು.
ದೊಡ್ಮನೆ ಕುಟುಂಬದ ಕುಡಿ ಜನರ ಸೇವೆ ಮಾಡಬೇಕಿದ್ದ ಜನಪ್ರತಿನಿಧಿ ಅಸಹಜ ಲೈಂಗಿಕ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಮುಂದೆ ಪ್ರಕರಣ ಯಾವೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಯಾವೆಲ್ಲಾ ವಿಷಯಗಳು ಹೊರಗಡೆ ಬರಲಿದೆ ಎಂಬುವುದು ಕಾದುನೋಡಬೇಕಿದೆ.!