ಬೆಂಗಳೂರು: ಕಬಾಬ್ ಎಂದ ತಕ್ಷಣ ಮಾಂಸಹಾರ ಪ್ರಿಯರಿಗೆ ಬಾಯಲ್ಲಿ ನೀರು ಊರುತ್ತದೆ. ಹಾಗಂತ ಎಲ್ಲಂದರಲ್ಲೆ ಕಬಾಬ್ ಸಿಕ್ಕಿದೆ ಅಂತ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಕೆಡುವುದಂತೂ ಸತ್ಯ. ಕಬಾಬ್ ತಯಾರಿಕೆಯಲ್ಲಿ ಕೃತಕ
ಬಣ್ಣಗಳ ಬಳಕೆಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ 7 ವರ್ಷಗಳವರೆಗೆ ಗರಿಷ್ಠ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ರಾಜ್ಯದ 36 ಕಡೆ ಕಬಾಬ್ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಯಲ್ಲೋ ಹಾಗೂ ಕಾರ್ಮೋಸಿನ್ ಮಾದರಿ ಕಂಡುಬಂದಿದೆ. ಇದರಿಂದ ಆಹಾರದಲ್ಲಿ ಕೃತಕ ಬಣ್ಣ ಬಳಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತ ಈ ತೀರ್ಮಾನ ಕೈಗೊಂಡಿದೆ. ಈ ಹಿಂದೆ ಕಾಟನ್ ಕ್ಯಾಂಡಿ, ಗೋಬಿಗೆ ಕೃತಕಬಣ್ಣಬಳಕೆ ನಿರ್ಬಂಧಿಸಲಾಗಿತ್ತು. ಇದೀಗ ಕಬಾಬ್, ಫಿಶ್, ಚಿಕನ್‌ಗೆ ಕೃತಕ ಬಣ್ಣ ಬಳಕೆ ಬ್ಯಾನ್ ಮಾಡಲಾಗಿದೆ.
ಗೋಬಿ ಮಂಚೂರಿಗೆ ರಾಸಾಯನಿಕ ಬಣ್ಣ ನಿಷೇಧಕ್ಕೂ ಮುನ್ನ, ಬೀದಿ ಬದಿ, ಹೊಟೇಲ್ ಗಳಲ್ಲಿ ಗೋಬಿಯ 171 ಮಾದರಿ ಸಂಗ್ರಹ ಮಾಡಲಾಗಿತ್ತು. ಇದರಲ್ಲಿ 107 ಕೃತಕ ಬಣ್ಣ ಬಳಕೆ ಆಗಿದ್ದು, ರೋಡಮೈನ್ ಬಿ, ಟಾರ್ ಟ್ರಾಸೈನ್ ಸ್ಯಾಂಪಲ್ ಅಂಶ ಪತ್ತೆಯಾಗಿತ್ತು. ರೋಡಮೈನ್ ಕ್ಯಾನ್ಸರ್ ಗೆ ಕಾರಣವಾಗಿದೆ ಎಂದು ಹೇಳಲಾಗಿತ್ತು. ಎಲ್ಲಂದರಲ್ಲೆ ಇನ್ನು ಮುಂದೆ ಕಬಾಬ್ ತಿನ್ನುವ ಮುಂಚೆ ಅದರ ನೈಜತೆ ಗುಣಮಟ್ಟ ನೋಡಿಕೊಂಡು ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.