ನವದೆಹಲಿ: ಮೇ 5 ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ ನಿರ್ವಹಣೆಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಏಜೆನ್ಸಿಗೆ ಹಸ್ತಾಂತರಿಸಲಾಗುವುದು ಎಂದು ಕೇಂದ್ರ ಘೋಷಿಸಿದ ಒಂದು ದಿನದ ನಂತರ ಇದು ಬಂದಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಉಲ್ಲೇಖದ ಮೇರೆಗೆ ಸಿಬಿಐ ಅಪರಿಚಿತ ವ್ಯಕ್ತಿಗಳ ವಿರುದ್ದ ಹೊಸ ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆ ಹೊಣೆಯನ್ನು ಕೇಂದ್ರ ಸರ್ಕಾರ ಶನಿವಾರವಷ್ಟೇ ಸಿಬಿಐಗೆ ಒಪ್ಪಿಸಿತ್ತು.
ಮೊದಲ ತಲೆದಂಡ : ನೀಟ್ ಪ್ರವೇಶ ಪರೀಕ್ಷೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮೊದಲ ತಲೆದಂಡವಾಗಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಡಿಜಿ ಸುಬೋದ್ ಕುಮಾರ್ ಅವರನ್ನು ವಜಾಗೊಳಿಸಲಾಗಿದೆ.
ಕಳೆದ 2 ತಿಂಗಳುಗಳಲ್ಲಿ, ದೇಶದ 2 ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮದ ನಂತರ ಇದೀಗ ಎನ್‌ಟಿಎ ಮುಖ್ಯಸ್ಥ ಸುಬೋದ್ ಕುಮಾರ್ ಸಿಂಗ್ ಅವರನ್ನು ವಜಾಗೊಳಿಸಲಾಗಿದೆ
ಇದೇ ವೇಳೆ ಭಾನುವಾರ ನಡೆಯಬೇಕಿದ್ದ ನೀಟ್ -ಪಿಜಿ ಪರೀಕ್ಷೆಯನ್ನು ಕಡೆಯ ಕ್ಷಣದಲ್ಲಿ ರದ್ದು ಮಾಡಿ ಸರಕಾರ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟಲ್ಲಿ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ನೋಟಿಸ್ ನೀಡಲಾಗಿದೆ.
ನೀಟ್, ನೆಟ್ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟಲ್ಲಿ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಗಿದೆ.
ಈ ವೇಳೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಾಗೇ, ಜುಲೈ 8ಕ್ಕೆ ವಿಚಾರಣೆ ಮುಂದೂಡಲಾಗಿದೆ.
ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಎನ್ ಟಿಎ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದ್ದು, ಪ್ರಸ್ತುತ ಖರೋಲಾ ಅವರು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ.