ಶಿಡ್ಲಘಟ್ಟ: ಹಲವು ವರ್ಷಗಳಿಂದ ಭೂಮಿಯನ್ನೇ ನಂಬಿಕೊಂಡು ಕೊಳವೆ ಬಾವಿ ಕೊರೆಯಿಸಿ ವ್ಯವಸಾಯ, ಕೃಷಿ ಚಟುವಟಿಕೆಗಳು ಮಾಡಿಕೊಂಡು ಬದುಕು ಸಾಗಿಸುತ್ತಿರುವ ರೈತರು, ಪಹಣಿ ರವಿನ್ಯೂ ದಾಖಲೆಗಳು ಹೊಂದಿದ್ದರೂ ಸಹಾ ಅಂತಹ ಜಮೀನುಗಳಿಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಬೇಲಿ ಹಾಕಿ ರೈತರನ್ನು ಒಕ್ಕಲೆಬ್ಬಸುವ ಮೂಲಕ ರೈತರ ಮೇಲೆ ಕೇಸ್ ದಾಖಲಿಸಿರುವ ಹಿನ್ನೆಲೆ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ವೃತ್ತದಲ್ಲಿ ನೂರಾರು ರೈತರು ಜಮಾಯಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆಯನ್ನು ಪ್ರತಿರೋಧಿಸಿ ಕಾನೂನು ಕೈಗೆತ್ತಿಕೊಂಡು ರೈತರ ಮೇಲೆ ಕೇಸ್ ದಾಖಲಿಸಿರುವುದಲ್ಲದೆ ಕೊಳವೆ ಬಾವಿಗೆ ಹಾನಿ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರೈತರ ತೊಂದರೆ ನೀಡರುವ ತಾಲ್ಲೂಕು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟಿಸಿದರು.
ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷರಾದ ಭಕ್ತರಹಳ್ಳಿ ಬೈರೇಗೌಡ ಅವರು ಮಾತನಾಡಿ ತಾಲ್ಲೂಕಿನ ಸಾದಲಿ ಹೋಬಳಿಯ ತಲಕಾಯಲಬೆಟ್ಟ, ಕರಿಯಪ್ಪನಹಳ್ಳಿ, ಗಾಂಡ್ಲಚಿಂತ ಗ್ರಾಮದ ರೈತರಿಗೆ ಸೇರಿದ ಜಮೀನುಗಳಿಗೆ ಪಹಣಿ ಹೊಂದಿದ್ದರೂ ಸಹ ಅರಣ್ಯ ಇಲಾಖೆಗೆ ಸೇರ್ಪಟ್ಟಿದೆ ಎಂದು ರೈತರ ಬೆಳೆಗಳನ್ನು, ಡ್ರಿಪ್ ಲೈನ್, ಪೈಪ್ ಲೈನ್ ನಾಶಪಡಿಸಿ ರೈತರ ಮೇಲೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಷ್ಟೆ ಅಲ್ಲದೆ ರೈತನ ಕೊಳವೆ ಬಾವಿಯನ್ನು ಮುಚ್ಚಿ ರೈತರ ಮೇಲೆ ದಬ್ಬಾಳಿಕೆ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳಾದ ಸುಧಾಕರ್, ಜಯಚಂದ್ರ, ಹಾಗೂ ಸಂದೀಪ್ ಅವರ ವಿರುದ್ದ ಕೂಡಲೆ ಪ್ರಕರಣ ದಾಖಲಿಸಬೇಕು ರೈತರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯ ಆಗಬಾರದು ರೈತರಿಗೆ ನ್ಯಾಯ ಸಿಗಬೇಕು ಜೊತೆಗೆ ರೈತರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವ ಕೆಲಸ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿ.ವೈ.ಎಸ್ಪಿ ಪಿ. ಮುರಳಿಧರ್ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಅವರು ಬೇಟಿ ನೀಡಿ ರೈತರ ಸಮಸ್ಯೆಗಳು ಆಲಿಸಿ ರೈತರಿಂದ ಮಾಹಿತಿ ಪಡೆದುಕೊಂಡು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ರೈತರ ಸಮಸ್ಯೆಗಳು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿ ರೈತರ ಮನವೋಲಿಸಿದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ ರಾಮನಾಥರೆಡ್ಡಿ, ಜಿಲ್ಲಾ ಕಾರ್ಯದರ್ಶಿ ವಿ ವೇಣುಗೋಪಾಲ್, ರಾಜ್ಯ ಸಂಚಾಲಕ ಲಕ್ಷ್ಮಣ್ ರೆಡ್ಡಿ, ರಾಜ್ಯ ಮಹಿಳಾ ಸಂಚಾಲಕಿ ಉಮಾ, ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಬಿ.ನಾರಾಯಣಸ್ವಾಮಿ, ತಲಕಾಯಲಬೆಟ್ಟ ಅಶ್ವತ್ಥರೆಡ್ಡಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಹಿಸಿದ್ದರು.