ನೂತನ ಸಂಸದರನ್ನು ಅಭಿನಂಧಿಸಿ ಸನ್ಮಾನಿಸಿದ ಶಾಸಕ ಬಿ.ಎನ್ ರವಿಕುಮಾರ್
ಶಿಡ್ಲಘಟ್ಟ : ಕೋಲಾರ- ಚಿಕ್ಕಬಳ್ಳಾಪುರ ಅವಿಭಾಜಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ತರಬೇಕಿದೆ ಜನ ನನಗೆ ಮತ ನೀಡಿ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ ನನ್ನ ಅಧಿಕಾರದ ಅವಧಿಯಲ್ಲಿ ಅವಿಭಾಜಿತ ಜಿಲ್ಲೆಗಳಲ್ಲಿರುವ ನಿರುದ್ಯೋಗ ಸಮಸ್ಯೆ ಮತ್ತು ಶಾಶ್ವತ ನೀರಾವರಿ ಯೋಜನೆ ಜಾರಿಗೆ ಹೆಚ್ಚು ಒತ್ತು ನೀಡಲಾಗುವುದು ನೀರಾವರಿ ಯೋಜನೆ ತೆಗೆದುಕೊಂಡು ಬರುವುದಕ್ಕೆ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದ ಎಂ. ಮಲ್ಲೇಶ್ ಬಾಬು ಭರವಸೆ ನೀಡಿದರು.
ಸಂಸದರಾಗಿ ಆಯ್ಕೆಯಾದ ಬಳಿಕ ಪ್ರಪ್ರಥಮ ಬಾರಿಗೆ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ಅವರನ್ನು ಮೇಲೂರಿನ ಶಾಸಕರ ಗೃಹ ಕಛೇರಿಯಲ್ಲಿ ಬೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಶಾಸಕರು ಮತ್ತು ಸಂಸದರು ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರಾಜ್ಯದ ನಾಯಕರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ನಮ್ಮ ಶಾಸಕರು, ಮುಖಂಡರ ನಿಯೋಗವು ಸಂಬಂಧಪಟ್ಟ ಕೇಂದ್ರ ನೀರಾವರಿ ಸಚಿವರನ್ನು ಈಗಾಗಲೇ ಬೇಟಿ ಮಾಡಿ ನೀರಿನ ಸಮಸ್ಯೆಯ ಕುರುತು ತಿಳಿಸಲಾಗಿದೆ. ಆ ಮೂಲಕ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಬೇಕು ಎಂದು ಗಮನ ಸೆಳೆದಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮೋದಿಯ ಸಂಪುಟದಲ್ಲಿ ಕೃಷಿ ಖಾತೆ ಸಿಗುತ್ತದೆಂಬ ಭರವಸೆ ಇತ್ತು, ಆದರೆ ಅದು ಕೈ ತಪ್ಪಿದೆ ಆದರೂ ಸಹಾ ನಮ್ಮ ನಾಯಕರ ಸಹಕಾರದಿಂದ ಜನರ ಧ್ವನಿಯಾಗಿ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ತರುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ದೇಶದ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ನನಗೆ ಪಕ್ಷದಿಂದ ಟಿಕೇಟ್ ನೀಡಿ ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಕಾರಣರಾಗಿದ್ದಾರೆ. ಕ್ಷೇತ್ರದ ಜನತೆ ನನ್ನ ಮೇಲೆ ಭರವಸೆ ಇಟ್ಟು ಜಯಶೀಲರನ್ನಾಗಿ ಮಾಡಿದ್ದಾರೆ ಎಂಟು ವಿಧಾನಸಭಾ ಕ್ಷೇತ್ರದ ಜನತೆಗೆ ಮತ್ತು ಎರಡೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಙತೆಗಳು ಸಲ್ಲಿಸುತ್ತೇನೆ ನನಗೆ ಜನರು ನೀಡಿರುವ ಅಧಿಕಾರದ ಅವಧಿಯಲ್ಲಿ ಜನರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆಂದು ತಿಳಿಸಿದರು.
ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರು ಮಾತನಾಡಿ ರಾಜ್ಯದಲ್ಲಿರುವ ನೀರಾವರಿ ಸಮಸ್ಯೆ ಮತ್ತು ರೈತರು ಅನುಭವಿಸುತ್ತಿರುವ ಕಷ್ಟಗಳು ಗಮನದಲ್ಲಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರ ಸ್ವಾಮಿ ಅವರ ಆಶೀರ್ವಾದದಿಂದ ಹಾಗೂ ಈ ದೇಶದ ನೆಚ್ಚಿನ ಜನಪ್ರಿಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಸಹಕಾರದಿಂದ ಮುಂದಿನ ದಿನಗಳಲ್ಲಿ ನಮ್ಮ ಅವಳಿ ಜಿಲ್ಲೆಗಳ ಅಭಿವೃದ್ದಿಗೆ ಹೆಚ್ಚಿನ ಅನುಧಾನವನ್ನು ತಂದು ಜಿಲ್ಲೆಯಲ್ಲಿರುವ ಸಮಸ್ಯೆ ಗಳನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಕೇಂದ್ರ ಸರ್ಕಾರದಿಂದ ಸಿಗುವ ಸೌಲತ್ತುಗಳು ಜನತೆಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ನಾವು ಮತ್ತು ನಮ್ಮ ನಾಯಕರು ಮಾಡುತ್ತೇವೆ ಎಂದರು. ಇದೇ ವೇಳೆಯಲ್ಲಿ ನೂತನ ಸಂಸದರನ್ನು ಸನ್ಮಾನಿಸಿ ಅಭಿನಂಧಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ತಾದೂರು ರಘು, ಜೆಡಿಎಸ್ ಮುಖಂಡರಾದ ಬಂಕ್ ಮುನಿಯಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಲಕ್ಷ್ಮೀನಾರಾಯಣ ರೆಡ್ಡಿ, ವಕೀಲರಾದ ಎ.ನಾರಾಯಣಸ್ವಾಮಿ, ಬಿ.ವಿ.ನಾರಾಯಣಸ್ವಾಮಿ, ಗಂಜಿಗುಂಟೆ ನರಸಿಂಹಮೂರ್ತಿ, ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತಿತರರು ಹಾಜರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ