ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಗೆ ನಾಲ್ಕು ಬಾರಿ ಎಲೆಕ್ಟ್ರಿಕ್ ಶಾಕ್ ನೀಡಿ ಹತ್ಯೆ ಮಾಡಿರುವ ಆಘಾತಕಾರಿ ಅಂಶ ಆತನ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರೇಣುಕಸ್ವಾಮಿ ಹತ್ಯೆಗೆ ಮುನ್ನ ಏನೆಲ್ಲಾ ನಡೆದಿತ್ತು ಎಂಬ ಒಂದೊಂದೆ ಮಾಹಿತಿಗಳು ಹೊರಬಂದ ಬೆನ್ನಲ್ಲೇ ಎಲೆಕ್ಟ್ರಿಕ್ ಶಾಕ್ ನೀಡಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಮತ್ತು ವಿಜ್ಞಾನ ಶಾಸ್ತ್ರ ವಿಭಾಗದ ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈಸೇರಿದೆ.
ಮರಣೋತ್ತರ ವರದಿಯಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿದೆ. ದೇಹದ ಮೇಲೆ 30 ಗಾಯಗಳು ಕಂಡು ಬಂದಿವೆ. ತಲೆಯ ಮೇಲೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಆತ ಸಾಯುವ ಮುನ್ನ ಎಲೆಕ್ಟ್ರಿಕ್ ಶಾಕ್ ನೀಡಲಾಗಿದೆ.
ಕಬ್ಬಿಣದ ರಾಡ್, ದೊಣ್ಣೆಯಿಂದ ಹಲ್ಲೆ ನಡೆಸಿದ್ದರಿಂದ ರಕ್ತ ಹೆಪ್ಪುಗಟ್ಟಿ, ರಕ್ತಸ್ರಾವದಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ತನಿಖೆ ಚುರುಕು: ದರ್ಶನ್ ಮತ್ತವರ ಗ್ಯಾಂಗ್ ಅನ್ನು ಕಸ್ಟಡಿಗೆ ಒಪ್ಪಿಸಿದ ಬಳಿಕ ತನಿಖೆಯನ್ನು ಚುರು ಕುಗೊಳಿಸಿರುವ ಖಾಕಿ ಪಡೆಗೆ ಪ್ರಕರಣದ ಸಾಕ್ಷಿ ನಾಶ ಮಾಡಲು ನಟ ದರ್ಶನ್ ಹಾಗೂ ಪವಿತ್ರಾಗೌಡ ಯತ್ನಿಸಿರುವ ಅಂಶ ಕೂಡ ಪತ್ತೆಯಾಗಿದೆ. ಆರೋಪಿಗಳ ಹತ್ತು ಮೊಬೈಲ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಮೊಬೈಲ್‌ನಲ್ಲಿ ಕೆಲ ಸ್ಫೋಟಕ ಅಂಶಗಳು ಲಭಿಸಿವೆ. ರೇಣುಕಾಸ್ವಾಮಿ ಕೊಲೆಯಾದ ದಿನದಂದು ನಟ ದರ್ಶನ ಧರಿಸಿದ್ದ ಬಟ್ಟೆ ಮತ್ತು ಶೂ ಪೊಲೀಸರು ಜಪ್ತಿಮಾಡಿದ್ದಾರೆ.
ದರ್ಶನ್ ಮನೆಯಲ್ಲಿ ಶನಿವಾರ ತಡರಾತ್ರಿ ಮನೆಯಲ್ಲಿ ಮಹಜರು ಮಾಡಿದ ವೇಳೆ ಒಗೆಯದೆ ಇದ್ದ ದರ್ಶನ್ ಶೂ ಹಾಗೂ ಬಟ್ಟೆಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮತ್ತೊಂದೆಡೆ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಯಾಗಿರುವ ಪವಿತ್ರಗೌಡ ನಿವಾಸದಲ್ಲಿ ಭಾನುವಾರ ಸ್ಥಳ ಮಹಜರು ನಡೆಸಲಾಗಿದೆ. ರೇಣುಕಾಸ್ವಾಮಿ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಪವಿತ್ರಾ ಗೌಡ ಚಪ್ಪಲಿ ಹಾಗೂ ಅಂದು ಧರಿಸಿದ್ದ ಬಟ್ಟೆಯನ್ನು ಕೂಡ ಜಪ್ತಿ ಮಾಡಲಾಗಿದೆ.