ನವದೆಹಲಿ: ಭಾರತದ ಚುನಾವಣೆ ವ್ಯವಸ್ಥೆಯಿಂದ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ತೆಗೆಯಬೇಕಿದೆ ಎಂದು ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಇವಿಎಂಗಳು ಯಾರೂ ಪರಿಶೀಲನೆ ಮಾಡಲು ಸಾಧ್ಯವಾಗದಂಥ ಬ್ಲ್ಯಾಕ್ ಬಾಕ್ಸ್ ಗಳಂತೆ’ ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಉಂಟಾದ ವಿವಾದಕ್ಕೆ ಸಂಬಂಧಿಸಿದ ಸುದ್ದಿಯ ವರದಿಯನ್ನು ಉಲ್ಲೇಖಿಸಿದ್ದಾರೆ ಹಾಗೂ ನಮ್ಮ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಸಂಶಯಗಳು ಮೂಡುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಸಂಸ್ಥೆಗಳ ವಿಶ್ವಾಸಾರ್ಹತೆಯು ಪ್ರಶ್ನಾರ್ಹವಾದಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಉಂಟಾಗುತ್ತದೆ ಮತ್ತು ವ್ಯವಸ್ಥೆಯು ವಂಚನೆಗೆ ಗುರಿಯಾಗುತ್ತದೆ ಎಂದು ಪೋಸ್ಟ್ ಮಾಡಿರುವ ರಾಹುಲ್, ಮುಂಬೈ ವಾಯುವ್ಯ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಯ ಸಂಬಂಧಿಕರೊಬ್ಬರು ತಮ್ಮ ಫೋನ್ ಅನ್ನು ಇವಿಎಂಗಳೊಂದಿಗೆ ಸಂಪರ್ಕಿಸಿದ್ದಾರೆ ಎಂಬ ಸುದ್ದಿ ವರದಿಯ ತುಣುಕನ್ನು ಇದರೊಂದಿಗೆ ಟ್ಯಾಗ್ ಮಾಡಿದ್ದಾರೆ.
ಮಾನವರು ಅಥವಾ ಎಐನಿಂದ ಇವಿಎಂಗಳನ್ನು ಮಾಡಬಹುದಾದ ಹ್ಯಾಕ್ ಸಣ್ಣ ಸಾಧ್ಯತೆ ಇದ್ದರೂ ಕೂಡ ಇದರ ಪರಿಣಾಮಗಳು ದೊಡ್ಡದಾಗಿರುತ್ತವೆ. ಹೀಗಾಗಿ ಇವಿಎಂಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಎಲಾನ್ ಮಸ್ಕ್ ಹೇಳಿದ್ದರು.
ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 48 ಮತಗಳಿಂದ ಗೆದ್ದ ರವೀಂದ್ರ ನಾಯ್ಕರ್ ಅವರ ಸೋದರ ಮಾವ ಮಂಗೇಶ್ ಪಾಂಡಿಲ್ಕರ್ ವಿರುದ್ಧ ಜೂನ್ 4ರಂದು ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ఇవిఎం ಯಂತ್ರವನ್ನು ಅಸ್ಲಾಕ್ ಮಾಡಲು ಅಗತ್ಯವಾದ ಒಟಿಪಿಯನ್ನು ಪಡೆಯಲು ಪಾಂಡಿಲ್ಕರ್ ಮೊಬೈಲ್ ಫೋನ್ ಬಳಸಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಮೊಬೈಲ್ ಫೋನ್ ಅನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದನ್ನು ದೃಢೀಕರಿಸಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.