ನವದೆಹಲಿ/ಶಿಡ್ಲಘಟ್ಟ : ಕೇಂದ್ರದ ಎನ್‌ಡಿಎ ಮೈತ್ರಿಕೂಟ ಸರಕಾರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕರ್ನಾಟಕ ಮೂಲದವರನ್ನು ಭೇಟಿ ಮಾಡಿರುವ ಶಿಡ್ಲಘಟ್ಟದ ಬಿಜೆಪಿ ಮುಖಂಡ, ಉದ್ಯಮಿ ಸೀಕಲ್ ರಾಮಚಂದ್ರಗೌಡ ಅವರು ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಅವರಲ್ಲಿ ಮನವಿ ಮಾಡಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಷಿ, ಸೋಮಣ್ಣ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಸೀಕಲ್ ರಾಮಚಂದ್ರಗೌಡ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವು ಗಡಿಭಾಗಕ್ಕೆ ಹೊಂದಿಕೊಂಡಿದ್ದು ತೀರಾ ಹಿಂದುಳಿದ ಪ್ರದೇಶವಾಗಿದೆ.
ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ಸಾವಿರಾರು ಕುಟುಂಬಗಳು ತೊಡಗಿಸಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ ರೇಷ್ಮೆ ಕೃಷಿ, ರೇಷ್ಮೆ ಉದ್ದಿಮೆ ಮತ್ತು ಹೈನುಗಾರಿಕೆಯು ಸಂಕಷ್ಟದಲ್ಲಿದ್ದು ಈ ಸಂಕಷ್ಟದಿಂದ ರೈತರನ್ನು, ರೀಲರುಗಳನ್ನು ಪಾರು ಮಾಡಬೇಕಿದೆ ಎಂದು ಮನವಿ ಮಾಡಿದರು.
ಇದಕ್ಕೂ ಮುಖ್ಯವಾಗಿ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಆಗಬೇಕಿದೆ. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಉದ್ಯೋಗಕ್ಕಾಗಿ ಯುವಕ ಯುವತಿಯರು, ಗೃಹಣಿಯರು, ಕಾರ್ಮಿಕರು ವಲಸೆ ಹೋಗುವುದನ್ನು ತಪ್ಪಿಸಬಹುದು ಎಂದು ಕೋರಿದರು.
ಚಿಂತಾಮಣಿ ತಾಲೂಕು ಮಸ್ತೇನಹಳ್ಳಿ ಬಳಿ ಕೈಗಾರಿಕಾ ಪ್ರದೇಶಕ್ಕಾಗಿ ಈಗಾಗಲೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆದಿದೆ. ಆದರೆ ಶಿಡ್ಲಘಟ್ಟದಲ್ಲಿ ಎಲ್ಲೂ ಕೈಗಾರಿಕಾ ಪ್ರದೇಶ ಇಲ್ಲ. ಇಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವುದರಿಂದ ಒಂದಷ್ಟು ಮಂದಿಗೆ ಸ್ಥಳೀಯವಾಗಿ ಉದ್ಯೋಗ ಸಿಗಲಿದೆ ಎಂದು ಆಶಿಸಿದರು.
ಗಡಿಭಾಗ ತಾಲೂಕು ಎಂದು ಪರಿಗಣಿಸಿ ವಿಶೇಷವಾಗಿ ವಸತಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಮನೆಗಳ ಮಂಜೂರು ಮಾಡಿ ನಿವೇಶನ ಇಲ್ಲದ ಮತ್ತು ವಸತಿರಹಿತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಇದೆಲ್ಲದಕ್ಕೂ ಮುಖ್ಯವಾಗಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಇದೊಂದು ಉತ್ತಮ ಅವಕಾಶ ದೊರೆತಿದ್ದು ಎಲ್ಲ ಸಚಿವರು ಸೇರಿ ಬಯಲು ಸೀಮೆಯ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿ ಮಾಡಬೇಕೆಂದು ಕ್ಷೇತ್ರದ ಜನತೆ ಪರವಾಗಿ ಕೋರಿದರು.
ಈ ವೇಳೆ ಶಾಸಕರಾದ ಜಿ.ಟಿ.ದೇವೇಗೌಡ, ಕೋಲಾರ ಕ್ಷೇತ್ರದ ನೂತನ ಸಂಸದ ಮಲ್ಲೇಶ್‌ಬಾಬು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಸೀಕಲ್ ರಾಮಚಂದ್ರಪಗೌಡ ಅವರು ಸಚಿವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.