ಬೆಂಗಳೂರು: ರೇಣುಕಾಸ್ವಾಮಿಯ ಬರ್ಬರ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತವರ ಗ್ಯಾಂಗ್ ಅನ್ನು ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಗಳ ಕಸ್ಟಡಿ ಅವಧಿ ಇಂದು (ಭಾನುವಾರ) ಅಂತ್ಯ ಗೊಳ್ಳುತ್ತಿತ್ತು. ಆದರೆ ಪೊಲೀಸರು ಒಂದು ದಿನ ಮುಂಚಿತವಾಗಿಯೇ ಶನಿವಾರ ಆರ್ಥಿಕ ವ್ಯವಹಾರಗಳ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶ ವಿಶ್ವನಾಥ್ ಸಿ.ಗೌಡರ್ ಮುಂದೆ ವಿಚಾರಣೆ ನಡೆಯಿತು. ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ, ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ವಿವರ ಒದಗಿಸಿದರು. ದರ್ಶನ್ ಮತ್ತವರ ಸಹಚರರನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಬೇಕಾಗಿದೆ. ಅವರೆಲ್ಲರನ್ನೂ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದರು.
ಬೆಂಗಳೂರು, ಚಿತ್ರದುರ್ಗದಲ್ಲಿ ಮಹಜರು ನಡೆದಿದೆ, ಆದರೆ, ಮೈಸೂರಿನಲ್ಲಿ ಮಹಜರು ಬಾಕಿ ಇರುವ ಕಾರಣ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು. ನಂತರ ನಟ ದರ್ಶನ್ ಪರ ವಕೀಲರಾದ ಅನಿಲ್ ಬಾಬು ವಾದ ಮಂಡಿಸಿ, ವಿಚಾರಣೆ ನೆಪದಲ್ಲಿ ಆರೋಪಿಗಳಿಗೆ ಪೊಲೀಸರು ಹಿಂಸೆ ನೀಡಿದ್ದಾರೆ. ಮಹಿಳಾ ಆರೋಪಿ ಪವಿತ್ರಾ ಗೌಡ ಅವರನ್ನು
ಆರು ದಿನಗಳ ವಿಚಾರಣೆಗೆ ಗುರಿಪಡಿಸಲಾಗಿದೆ. ಎಲ್ಲದಕ್ಕೂ ದರ್ಶನ್ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಕೊಲೆ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ದರ್ಶನ್ ಮೇಲೆ ಎಲ್ಲಾ ಅರೋಪಗಳನ್ನು ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಆರೋಪಿಗಳ ಹೇಳಿಕೆಗಳು ಸೋರಿಕೆಯಾಗುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿ, ಮತ್ತೆ ಕಸ್ಟಡಿಗೆ ನೀಡುವುದು ಬೇಡ ಎಂದು ವಾದಿಸಿದರು.
ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿ ಹಿಂಸೆ ನೀಡಲಾಗಿದೆ. ಆರೋಪಿಗಳು ಯಾವೆಲ್ಲಾ ಉಪಕರಣ ಬಳಸಿದ್ದಾರೋ, ಅವುಗಳನ್ನು ವಶಕ್ಕೆ ಪಡೆಯಬೇಕು. ಇದಕ್ಕೆ ಸಮಯಾವಕಾಶ ಬೇಕು. ಹೀಗಾಗಿ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕೆಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಮನವಿ ಮಾಡಿದರು. ವಿಚಾರಣೆ ವೇಳೆ ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ನನ್ನ ಕಕ್ಷಿದಾರರ ಭೇಟಿಗೆ ಪೊಲೀಸರು ಅವಕಾಶ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನ್ಯಾಯಾಧೀಶ ವಿಶ್ವನಾಥ್ ಅವರು ವಾದ ಪ್ರತಿವಾದ ಆಲಿಸಿ, ಜೂನ್ 20ರವರೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಆದೇಶಿಸಿದರು. ಬಳಿಕ ಪೊಲೀಸರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು.