ಶಿಡ್ಲಘಟ್ಟ : ರೈತರು ಬೆಳೆಯುವ ರಾಗಿ, ಮುಸುಕಿನ ಜೋಳ, ನೆಲಗಡಲೆ, ತೊಗರಿ, ಭತ್ತ, ಟಮೋಟ ಬೆಳೆಗಳಿಗೆ 2024-25 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು ಕರೆ ನೀಡಲಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿ ಅವರು ಮಾಹಿತಿ ನೀಡಿದರು.
ಕಛೇರಿಯಲ್ಲಿ ಪತ್ರಿಕೆಯೊಂದಿಗೆ ಮಾಹಿತಿ ನೀಡಿದ ಅವರು ಇಲಾಖೆಗೆ ಸರ್ಕಾರದಿಂದ ಬರುವಂತಹ ಕೃಷಿ ಯಾಂತ್ರೀಕರಣ, ಹನೀರಾವರಿ ಸಾಮಾಗ್ರಿಗಳು, ಬಿತ್ತನೆ ಬೀಜ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಅರ್ಹ ರೈತರಿಗೆ ಸಿಗುವಂತಾಗಬೇಕು ಆ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೂ ಸಹಾ ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಪ್ರಾಮಾಣಿಕವಾಗಿ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು 2024-25ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು. ಬೆಳೆ ಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ್ ಸಂಖ್ಯೆ ಜೋಡಿಸಿದ ಬ್ಯಾಂಕ್ ಖಾತೆ ಅಥವಾ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೊಂದಿಗೆ ಡಿಸಿಸಿ ಅಥವಾ ಇತರೆ ಬ್ಯಾಂಕ್ ಗ್ರಾಮ್-ಒನ್ ಮತ್ತು ಸಿ.ಎಸ್.ಸಿ ಕೇಂದ್ರಗಳಲ್ಲಿ ನೊಂದಾಯಿಸಬಹುದಾಗಿದೆ. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಪ್ರೂಟ್ ಐಡಿ (ಎಪ್.ಐ.ಡಿ) ಹೊಂದಿರಬೇಕು ಎಂದು ತಿಳಿಸಿದರು.
ಯೋಜನೆಗೆ ಒಳಪಡುವ ವಿವಿಧ ಬೆಳಗಳಿಗೆ ಸಾಲ ಪಡೆಯುವ, ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು ಬೆಳೆವಾರು ಪ್ರಿಮಿಯಂ ಮೊತ್ತ ಹಾಗೂ ಅಂತಿಮ ದಿನಾಂಕದ ಸಂಪೂರ್ಣ ವಿವರ ಇಲ್ಲಿದೆ.