ಶಿಡ್ಲಘಟ್ಟ: 28-ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ. ಮಲ್ಲೇಶ್ ಬಾಬು ಅವರು 691481 ಮತಗಳು ಪಡೆದು 71388 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಜೆ.ಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ ದೇವೇಗೌಡರ ಸೂಚನೆ ಮೇರೆಗೆ ಈ ಬಾರಿ ಚುನಾವಣೆ ಎದುರಿಸಿದ್ದು ಜೆ.ಡಿಎಸ್ ಪಕ್ಷ ಎಲ್ಲಿದೆ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಉತ್ತರ ಕೊಟ್ಟಿದ್ದೇವೆಂದು ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಶಾಸಕರ ಗೃಹ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೋಲಾರ ಲೋಕಸಭಾ ಕ್ಷೇತ್ರ ಮತ್ತು ಮಂಡ್ಯ ಎರಡು ಕ್ಷೇತ್ರಗಳಲ್ಲಿ ಬಹುತದಿಂದ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೇಟ್ ನೀಡುವುದಕ್ಕೆ ಪಕ್ಷದಲ್ಲೆ ವಿರೋಧವಿತ್ತು ಶಾಸಕರು ಸಹಾ ಟಿಕೇಟ್ ನೀಡುವುದು ಬೇಡವೆಂದು ಹೇಳಿದ್ದರು ನಾನು ಸಹಾ ದೇವೇಗೌಡರಿಗೆ ಹೇಳಿದ್ದೆ, ಆದರೆ ಮೊದಲೇ ಅವರಿಗೆ ಟಿಕೇಟ್ ನಿಗಧಿಯಾಗಿದ್ದರಿಂದ ಮತ್ತೆ ಬದಲಾಯಿಸಲಿಲ್ಲ. ಪ್ರಜ್ವಲ್ ರೇವಣ್ಣ ಸೋಲುವುದು ಮೊದಲೇ ನಮಗೆ ಗೊತ್ತಿತ್ತು. ಹೀಗಾಗಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ. ಮಂಡ್ಯದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2 ಲಕ್ಷ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ರಾಜ್ಯದ ರೈತರ ಕಷ್ಟಗಳಿಗೆ ಸ್ಪಂಧಿಸುವ ವ್ಯಕ್ತಿ ನಮ್ಮ ಕುಮಾರಣ್ಣ ಕೇಂದ್ರ ಸಚಿವರಾಗುವುದು ನಿಶ್ಚಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಅವಿಭಾಜಿತ ಬಯಲು ಸೀಮೆ ಜಿಲ್ಲೆಗಳ ರೈತರಿಗೆ ಶಾಶ್ವತ ನೀರಾವರಿ ಯೋಜನೆ ತರುವುದಕ್ಕೆ ಕೇಂದ್ರ ಸರ್ಕಾರದಿಂದ ಅನುಧಾನದ ತೆಗೆದುಕೊಂಡು ಬರುವ ಶಕ್ತಿ ಈಗ ಬಂದಿದೆ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 19 ಎನ್.ಡಿ.ಎ ಮೈತ್ರಿ ಅಭ್ಯರ್ಥಿಗಳಿಗೆ ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಾಧನೆ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಕ್ಕೆ ಹೊರಟಿದ್ದು, ಬಡವರ ಪರವಾಗಿ, ರೈತರ ಪರವಾಗಿ ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯ ಅವರಿಗೆ ಗರ್ವಭಂಗ ಮಾಡಬೇಕೆಂದು ದೇವೇಗೌಡರು ಸೂಚನೆ ನೀಡಿದ್ದಂತೆ ನಾವು ಕೆಲಸ ಮಾಡಿದ್ದೇವೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದೇವೆ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಜೆಡಿಎಸ್ 19 ಸ್ಥಾನಗಳು ಗೆದ್ದಿರುವುದು ಇತಿಹಾಸ. ಕಾಂಗ್ರೇಸ್ ಸರ್ಕಾರದ ಗ್ಯಾರಂಟಿಗಳಿಗೆ ಜನ ಮಣೆ ಹಾಕಲಿಲ್ಲ.ವಾಲ್ಮೀಕಿ ಸಮುದಾಯದ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ಹಗರಣವಾಗಿದೆ. ಡಿಕೆ ಶಿವಕುಮಾರ್ ಹೇಳುತ್ತಿದ್ದ ಮಾತು ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿ ಇರಬೇಕು ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಹೇಳುತ್ತಿದ್ದರು. ಈಗ ನಾವು ಹೇಳುತ್ತೇವೆ. ಕೈ ಅಧಿಕಾರದ್ದಲ್ಲಿದ್ದರೆ ಪೋರ್ಜರಿ ಮಾಡಿ ಲೂಟಿ ಹೊಡುತ್ತದೆ ಎಂದು ಟೀಕಿಸಿದರು.
ನನ್ನ ಅಧಿಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ದಿ ಕೆಲಸಗಳು ಮಾಡಿ ತೋರಿಸುತ್ತೇವೆ. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು ಜೊತೆಗೆ ನನ್ನ ಅನುಧಾನದಲ್ಲಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತೇನೆ. ಅದಕ್ಕೂ ಯಾವುದೇ ಅಡೆ ತಡೆ ಬಂದರೂ ಬಿಡುವುದಿಲ್ಲ. ಕೆಲವರಿಗೆ ಕಮೀಷನ್ ಕಾಸು ಸಿಗುತ್ತಿಲ್ಲ. ಅದಕ್ಕಾಗಿ ಅಭಿವೃದ್ದಿ ಕಾಮಗಾರಿಗಳು ಮಾಡದಂತೆ ದೂರುಗಳು ಕೊಡುವ ಕೆಲಸ ಮಾಡುತ್ತಿದ್ದು ನನ್ನ ಸ್ವಂತ ಹಣವನ್ನು ನೀಡಿ ಕೆಲಸ ಮಾಡುತ್ತೇನೆ ಹೊರತು ಅಭಿವೃದ್ದಿ ಕೆಲಸಗಳು ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಂಕ್ ಮುನಿಯಪ್ಪ, ಜೆಡಿಎಸ್ ಅಧ್ಯಕ್ಷ ವೆಂಕಟೇಶಪ್ಪ, ಪಿ.ಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರ, ಹುಜಗೂರು ರಾಮಣ್ಣ, ಸದಾಶಿವ, ಮೇಲೂರು ಮಂಜುನಾಥ್, ಗಂಜಿಗುಂಟೆ ನರಸಿಂಹಮೂರ್ತಿ, ಶಿವಣ್ಣ, ನಗರಸಭೆ ಸದಸ್ಯರಾದ ರಾಘವೇಂದ್ರ, ಸುರೇಶ್, ಎಸ್.ಎಂ. ರಮೇಶ್, ಬಾಲಕೃಷ್ಣ, ಅನ್ಸರ್, ನವೀನ್ ಕುಮಾರ್, ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಇತರರು ಹಾಜರಿದ್ದರು.
ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ