ಬೆಂಗಳೂರು: ಲೈಂಗಿಕ ದೌರ್ಜನ್ಯ (ರೇಪ್) ಆರೋಪಕ್ಕೆ ಗುರಿಯಾಗಿ 33 ದಿನಗಳಿಂದ ಜರ್ಮನಿಯಲ್ಲಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಮಧ್ಯರಾತ್ರಿ 12.30 ಅಂತಾರಾಷ್ಟ್ರೀಯ ವಿಮಾನ ಕೆಂಪೇಗೌಡ ನಿಲ್ದಾಣಕ್ಕೆ ಬಂದಿಳಿದಿದ್ದು ಎಸ್‌ಐಟಿ ವಶಕ್ಕೆ ಪಡೆದಿದ್ದಾರೆ.
ದೇಶ ಬಿಟ್ಟುಹೋಗಿ ಬರೋಬ್ಬರಿ 31 ದಿನಗಳ ಬಳಿಕ ವಿಡಿಯೋ ಮಾಡಿ ಮೇ.31ರಂದು ನಾನು ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಆ ಮೂಲಕ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬರಲು ಟಿಕೆಟ್ ಕೂಡ ಬುಕ್ ಮಾಡಿದ್ದರು. ಆದರೆ ಆತ ಎಲ್ಲಿಂದ ವಿಡಿಯೋ ಮಾಡಿದ್ದ ಎನ್ನುವುದು ಗೊತ್ತಾಗಿರಲಿಲ್ಲ. ಬಳಿಕ ಎಸ್‌ಐಟಿ ಯೂರೋಪ್‌ನ ಹಂಗೇರಿಯ ಬುಡಾಪೆಸ್ಟ್‌ನಿಂದ ವಿಡಿಯೋ ಮಾಡಿದ್ದಾಗಿ ಪತ್ತೆ ಹಚ್ಚಿತ್ತು. ಮೊಬೈಲ್ ಐಪಿ ಅಡ್ರೆಸ್ ಟ್ರೇಸ್ ಮಾಡಿದಾಗ ಆತ 2 ದಿನ ಮೊದಲೇ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಬಳಿಕ ರಿಲೀಸ್ ಮಾಡಿರುವುದನ್ನು ಎಸ್‌ಐಟಿ ಪತ್ತೆ ಹಚ್ಚಿತ್ತು.
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಲೇ ಮಹಿಳೆಯರ ಪ್ರತಿಭಟನೆ, ಬೆಂಬಲಿಗರ ಘೋಷಣೆ, ಪತ್ರಕರ್ತರು ಹಾಗೂ ವಕೀಲರ ಕಣ್ಣಪ್ಪಿಸಿ ಕರೆದುಕೊಂಡು ಹೋಗಲು ಎಸ್‌ಐಟಿ ಮುಂದಾಗಿತ್ತು. ಪ್ರಜ್ವಲ್ ಬಂಧನಕ್ಕೆ ಎಸ್‌ಐಟಿ ತೀವ್ರ ಪ್ರಯತ್ನ ನಡೆಸಿತ್ತು. ರೆಡ್ ಕಾರ್ನರ್ ಮತ್ತು ಬ್ಲೂ ಕಾರ್ನರ್ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮನವಿ ಮಾಡಿ, ಎಸ್‌ಐಟಿ ಮುಂದೆ ಶರಣಾಗಿ ವಿಚಾರಣೆಗೆ ಸಹಕರಿಸುವಂತೆ ಮನವಿಮಾಡಿದ್ದರು.
ಆದರೆ ಪ್ರಜ್ವಲ್ ಮೊಂಡಾಟ ಪ್ರದರ್ಶಿಸಿದ್ದರಿಂದ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಪ್ರಜ್ವಲ್ ಗೆ ನಿಮ್ಮ ಪಾಸ್ ಪೋರ್ಟ್ ಏಕೆ ರದ್ದು ಮಾಡಬಾರದು ಎಂದು ವಿದೇಶಾಂಗ ಇಲಾಖೆ ವಿವರಣೆ ಕೇಳಿ ನೋಟಿಸ್ ನೀಡಿ 10 ದಿನದಲ್ಲಿ ಉತ್ತರ ನೀಡುವಂತೆ ಸೂಚಿಸಿತ್ತು.
ಇಂದು ಜಾಮೀನು ಅರ್ಜಿ ವಿಚಾರಣೆ : ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಸೇರಿ ಎಫ್‌ಐಆರ್ ದಾಖಲಾಗಿರುವ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 31ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತ ತೀರ್ಪು ಕೂಡ ಶುಕ್ರವಾರವೇ ಹೊರಬೀಳಲಿದೆ.