ಚುನಾವಣಾ ಫಲಿತಾಂಶ ಜೂ.4 ರಂದು ಮಂಗಳಕರ ದಿನದಂದು ಪ್ರಕಟವಾಗಲಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಹ್ಯಾಟ್ರಿಕ್ ಜಯಭೇರಿ ಬಾರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭಾನುವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ 6 ಹಂತಗಳ ಲೋಕಸಭೆಯ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಘೋಷಣೆ ಮೊಳಗುತ್ತಿದೆ. ದೇಶದಲ್ಲಿ ನಡೆದ ಆರು ಹಂತಗಳಲ್ಲಿ ಸಾರ್ವಜನಿಕರು ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆಯಾದರೆ ಐದು ವರ್ಷದಲ್ಲಿ ಐವರು ಪ್ರಧಾನ ಮಂತ್ರಿಗಳನ್ನು ನೇಮಕ ಮಾಡುತ್ತಾರೆ. ದೇಶದಲ್ಲಿ ಅಂತಹ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಅವರು ಮನವಿ ಮಾಡಿದರು.
ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಆದಾಗಲೆಲ್ಲಾ ತುಷ್ಠಿಕರಣ ರಾಜಕಾರಣ ಮಾಡಲಾಗಿದೆ. ಅದನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ ಉತ್ತರ ಪ್ರದೇಶದ ಪೂರ್ವಾಂಚಲ ವಲಯ ಘೋಸಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮೋದಿ, ಇಂಡಿಯಾ ಮೈತ್ರಿಕೂಟದ ಬಣದ ಪಕ್ಷಗಳು ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ರದ್ದುಮಾಡಿ ಅದನ್ನು ಮುಸ್ಲಿಮರಿಗೆ ನೀಡಲಿವೆ ಎಂದು ಟೀಕಿಸಿದರು.
ಸಮಾಜವಾದಿ ಮತ್ತು ಕಾಂಗ್ರೆಸ್ ಅನೇಕ ವರ್ಷಗಳಿಂದ ಪೂರ್ವಾಂಚಲವನ್ನು ನಿರ್ಲಕ್ಷಿಸಿವೆ. ಮಾಫಿಯಾವಲಯ, ಬಡತನ ಮತ್ತು ಆಸಹಾಯಕತೆಯ ಪ್ರದೇಶವನ್ನಾಗಿ ಪರಿವರ್ತಿಸಿವೆ. ಅವರು ವಿವಿಧ ಜಾತಿಗಳು ತಮ್ಮೊಳಗೆ ಜಗಳವಾಡುತ್ತಿವೆ ಎಂದು ಲೇವಡಿ ಮಾಡಿದರು.
ಎರಡನೇ ದರ್ಜೆಗೆ ತಳ್ಳುವ ಯತ್ನ ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶವನ್ನು ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಿರ್ಲಕ್ಷಿಸಿವೆ. ಅಲ್ಲದೆ, ಅದನ್ನು ಮಾಫಿಯಾ, ಬಡತನ ಮತ್ತು ಅಸಹಾಯಕತೆಯ ಪ್ರದೇಶವನ್ನಾಗಿ ಪರಿವರ್ತಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಜಿಲ್ಲೆಯ ಘೋಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ
ಅವರು, ‘ಪೂರ್ವಾಂಚಲದಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಕಾಂಗ್ರೆಸ್ ಘೋಷಿಸಿತು ಹಾಗೂ ಅಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದೆ. ಬಹುಸಂಖ್ಯಾತ ಸಮುದಾಯವನ್ನು ದೇಶದ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ‘ಇಂಡಿಯಾ’ ಮೈತ್ರಿಕೂಟ ಬಯಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಮನೆಗಳಿಗೆ ಬೆಂಕಿ ಹಚ್ಚಿ ಜನರ ಭೂಮಿಯನ್ನು ಅತಿಕ್ರಮಿಸಿಕೊಂಡು, ಗಲಭೆಕೋರರಿಗೆ ಉತ್ತೇಜನ ನೀಡಿ ‘ಇಂಡಿಯಾ’ ಮೈತ್ರಿಕೂಟವನ್ನು ಸೇರಿಕೊಂಡಿರುವ ನಾಯಕರಿಗೆ ಪೂರ್ವಾಂಚಲಗೆ ಕಾಲಿಡಲು ಬಿಡಬಾರದು ಎಂದು ಅವರು ತಿಳಿಸಿದ್ದಾರೆ.