ಚಿಕ್ಕಮಗಳೂರು: ರಾಜ್ಯ ಸರ್ಕಾರ ಮುಸಲ್ಮಾನರ ತುಷ್ಟಿಕರಣಕ್ಕೆ ಮುಂದಾಗಿದ್ದು, ರಾಜ್ಯದ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ನೈರುತ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಭೆ ನಡೆಸಲು ನಗರಕ್ಕೆ ಭಾನುವಾರ ಆಗಮಿಸಿದ್ದ ಅವರು, ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕೊಲೆ ಪ್ರಕರಣಗಳು ನಡೆದಿದ್ದರೆ, ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವಪ್ಪಿದ್ದು, ಠಾಣೆಯ ಮೇಲೆ ಕಲ್ಲುತೂರಾಟ ನಡೆಸಿದ್ದರಿಂದ ಹಲವು ಮಂದಿ ಪೊಲೀಸರಿಗೆ ಗಾಯಗಳಾಗಿವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದು 1 ವರ್ಷವಾಗಿದ್ದು, ಸಾಧನೆ ಶೂನ್ಯವಾಗಿದೆ. ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ. ಅಭಿವೃದ್ಧಿ ಕೆಲಸಕ್ಕಾಗಿ ಮುಖ್ಯಮಂತ್ರಿಗಳು ಯಾವುದೇ ಗುದ್ದಲಿಪೂಜೆ ನೆರವೇರಿಸಿಲ್ಲ. ಗ್ಯಾರಂಟಿ ಗುಂಗಿನಲ್ಲೇ ಮುಳುಗಿದ್ದಾರೆಂದು ಟೀಕಿಸಿದರು.
ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ಅರಿವಾಗಲಿದೆ.ರಾಜ್ಯ ಸರ್ಕಾರ ಎನ್.ಇ ಪಿ. ರದ್ದುಪಡಿಸಿದ್ದು, ಎಸ್‌ಇಪಿ ಜಾರಿಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಿದ್ದಾರೆಂದು ಕಿಡಿಕಾರಿದರು.
ವಿಧಾನಪರಿಷತ್ ಚುನಾವಣೆಯಲ್ಲಿ 4ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿದ್ದರೆ, ಜೆಡಿಎಸ್ 2 ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಈಗಾಗಲೇ ದಾವಣಗೆರೆ, ಚಿತ್ರದುರ್ಗ, ತುಮಕೂರು ಮೈಸೂರಿನಲ್ಲಿ ಪ್ರಚಾರಕಾರ್ಯ ನಡೆಸಿದ್ದೇನೆ. ಕೆಲವು ಸಮಸ್ಯೆಗಳನ್ನು ಬದಿಗೊತ್ತಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಆಂತರಿಕ ಸಮೀಕ್ಷೆ ನಡೆಸಿಲ್ಲ. ಅದರ ಅವಶ್ಯಕತೆ ಯೂ ಇಲ್ಲ.ಮೋದಿಯ ಹೆಸರಿನ ಮೇಲೆ ವಿಶ್ವಾಸ ಇದೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸರ್ಕಾರದ ಆಡಳಿತವನ್ನು ವಿರೋಧಿಸಿ ಬೆಂಗಳೂರಿನಲ್ಲಿ ಮೇ.28 ರಂದು ಬೃಹತ್ ಹೋರಾಟ ಹಮ್ಮಿಕೊಂಡಿದ್ದೇವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಪಶುಸಂಗೋಪನಾ ಇಲಾಖೆಗೆ ಒತ್ತುಕೊಟ್ಟಿದ್ದರು. ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡಬೇಕಿರುವ 28 ಕೋಟಿ ರೂ. ಬಾಕಿ ಇದೆ ಎಂದು ಹೇಳಿದರು. ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಸಚಿವರಾದ ಸಿ.ಟಿ.ರವಿ, ವಿ.ಸುನಿಲ್‌ಮಾರ್, ಡಿ.ಎನ್. ಜೀವರಾಜ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸಪೂಜಾರಿ, ವಿಧಾನಪರಿಷತ್ ಸದಸ್ಯ ಅರುಣ್, ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯಸರ್ಜಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ .ದೇವರಾಜಶೆಟ್ಟಿ, ಮಾಜಿ ಅಧ್ಯಕ್ಷ ಹೆಚ್.ಸಿ. ಕಲ್ಮರುಡಪ್ಪ ಇದ್ದರು.