ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಕ್ಕೆ ಗುರಿಯಾಗಿ ವಿದೇಶಕ್ಕೆ ತೆರಳಿ ಬೆಂಗಳೂರಿಗೆ ವಾಪಸ್ ಬರಲು ಮೊಂಡಾಟ ನಡೆಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಗೆ ಕೇಂದ್ರ, ವಿದೇಶಾಂಗ ಇಲಾಖೆ ಚಾಲನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಪತ್ರ ಬರೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಪ್ರಕ್ರಿಯೆಯನ್ನು ಬಿರುಸುಗೊಳಿಸಿದೆ. ಇದರ ಹಿನ್ನೆಲೆಯಲ್ಲಿ ಪ್ರಜ್ವಲ್ ಇಕ್ಕಟ್ಟಿಗೆ ಸಿಲುಕಿದ್ದು, ಬಂಧನ ಬಹುತೇಕ ಖಚಿತ ಎಂದೇ ಮೂಲಗಳು ತಿಳಿಸಿವೆ. ಪ್ರಜ್ವಲ್ ಅವರ ಪಾಸ್‌ಪೋರ್ಟ್ ರದ್ದು ಕೋರಿ ಎಸ್‌ಐಟಿ ಅಧಿಕಾರಿಗಳು ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದರು. ಈ ಮೊದಲು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದ ವೇಳೆ ನ್ಯಾಯಾಲಯದಿಂದ ಬಂಧನದ ವಾರಂಟ್ ಬೇಕೆಂದು ಗೃಹ ಸಚಿವಾಲಯ ಹೇಳಿತ್ತು. ಆರೆಸ್ಟ್ ವಾರಂಟ್ ಪಡೆದು ಎಸ್‌ಐಟಿಯವರು ಪುನಃ ಪತ್ರ ಬರೆದಿದ್ದಾರೆ. ಹೀಗಾಗಿ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆ ಆರಂಭಿಸಿದೆ.
ಭಾರತೀಯ ವಿದೇಶಾಂಗ ಇಲಾಖೆ ವ್ಯಾಪ್ತಿಗೆ ಒಳಪಡಲಿದೆ. ಎಸ್ ಐಟಿಯಿಂದ ಬಂದಿರುವ ಪತ್ರವನ್ನು ದೃಢೀಕರಣಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡಿದ ಬಳಿಕ ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸಿ ಸಮತಿ ಸೂಚಿಸಿದರೆ ಭಾರತೀಯ ವಿದೇಶಾಂಗ ಇಲಾಖೆಯು ಪ್ರಕ್ರಿಯೆ ಚಾಲನೆಗೊಳಿಸಿ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲಿದೆ. ಎಂದು ಮೂಲಗಳು ತಿಳಿಸಿವೆ.
ಪ್ರಜ್ವಲ್‌ಗೆ ದೇವೇಗೌಡರ ‘ಎಚ್ಚರಿಕೆ ಪತ್ರ’ : ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದು ವಿಶೇಷ ತನಿಖಾ ತಂಡದ ಎದುರು ಹಾಜರಾಗುವಂತೆ ಸಂಸದ ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ತಾಕಿತು ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ನನ್ನ ಮೇಲೆ ಗೌರವ ಇದ್ದರೆ ತಕ್ಷಣವೇ ವಾಪಸ್ ಮರಳಿ ಬಾ ಎಂದು ಪ್ರಜ್ವಲ್ ಗೆ ತಾಕೀತು ಮಾಡಿದ್ದಾರಲ್ಲದೆ. ಪ್ರಜ್ವಲ್ ರೇವಣ್ಣನಿಗೆ ನನ್ನ ಎಚ್ಚರಿಕೆ ಎಂದು ತಿಳಿಸಿದ್ದಾರೆ.
ನಾನು ಮೇ 18ನೇ ತಾರೀಖಿನಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕುರಿತಾಗಿ ಮಾತನಾಡಿದ್ದೆ. ಆತ ನನಗೆ, ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು. ನಾನು ಈಗಾಗಲೇ ಪ್ರಕಾರ ಸ್ಪಷ್ಟಪಡಿಸಿರುವ ಹಾಗೆ ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನೆಂದಾದರೆ, ಅವನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ನನ್ನ ಮಗ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಹಗರಣ ಹೊರಬಿದ್ದ ಮೊದಲ ದಿನದಿಂದಲೇ ಪ್ರತಿಪಾದಿಸಿದ್ದಾರೆ.
ನನ್ನ ಮತ್ತು ನನ್ನ ಕುಟುಂಬದವರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡುತ್ತಿರುವವರನ್ನು ನಾನು ಟೀಕೆ ಮಾಡುವುದಿಲ್ಲ. ಪ್ರಜ್ವಲ್‌ನ ಚಟವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ. ಅವನನ್ನು ರಕ್ಷಿಸುವ ಯಾವುದೇ ಔದಾರ್ಯವೂ ನನಗಿಲ್ಲ. ಅವನ ಈಗಿನ ಚಲನವಲನ ಮತ್ತು ಅವನ ವಿದೇಶಿ ಯಾತ್ರೆಯ ಬಗ್ಗೆ ನನಗೆ ಏನೂ ತಿಳಿದಿಲ್ಲ, ತಿಳಿದಿರಲಿಲ್ಲ ಎಂದು ನಾನು ಜನರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ. ಉತ್ತರಿಸಬಲ್ಲೆ. ನನಗೆ ದೇವರಲ್ಲಿ ನಂಬಿಕೆ ಇದೆ ಮತ್ತು ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದು ನಾನು ನಂಬಿದ್ದೇನೆ.
ಪ್ರಜ್ವಲ್ ಎಲ್ಲಿದ್ದರೂ ಬಂದು ಪೊಲೀಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಜು, ಮರ್ಜಿಯಿಲ್ಲದೆ ಹೇಳಬಲ್ಲೆ ಮತ್ತು ಹೇಳುತ್ತಿದ್ದೇನೆ. ಇದು ನಾನು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ಕೂಡ ತಿಳಿಯಬೇಕು. ಅವನು ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪವನ್ನೂ ಎದುರಿಸಬೇಕಾಗುತ್ತದೆ. ಈ ಎಚ್ಚರಿಕೆಗೆ ಅವನು ತಲೆಬಾಗದಿದ್ದಲ್ಲಿ ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಅವನಿಗೆ ಏನಾದರೂ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು. ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗುವುದಷ್ಟೆ ನನಗೆ ಮುಖ್ಯ ಎಂದು ಪ್ರಜ್ವಲ್ ರೇವಣ್ಣನಿಗೆ ಬರೆದಿರುವ ಪತ್ರದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಕೇಂದ್ರಕ್ಕೆ ಸಿಎಂ ಎರಡನೇ ಪತ್ರ : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೀಡಲಾಗಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರಬರೆದಿದ್ದಾರೆ
ಪ್ರಜ್ವಲ್ ರೇವಣ್ಣ ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ತ್ವರಿತ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಈ ಘಟನೆಗಳು ಕರ್ನಾಟಕ ರಾಜ್ಯದ ಜನರ ಆತ್ಮಸಾಕ್ಷಿಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಪುನರಾಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಮೊಮ್ಮಗ ಏಪ್ರಿಲ್ 27ರಂದು ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. 2024ರಲ್ಲಿ ಜರ್ಮನಿಗೆ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್ ಡಿ
1135500 ಅನ್ನು ಬಳಸಿಕೊಂಡು ದೇಶ ಬಿಟ್ಟು ಹೋಗಿದ್ದಾರೆ. ಅವರ ವಿರುದ್ಧ ಕೇಳಿಬಂದಿರುವ ಆರೋಪಗಳು, ಹೇಯ ಕೃತ್ಯಗಳು ಹೊರಬಂದ ಬಳಿಕ ಮೊದಲ ಎಫ್‌ಐಆರ್ ದಾಖಲಾಗುವ ಕೆಲವೇ ಗಂಟೆಗಳ ಮೊದಲು ಅವರು ಪರಾರಿಯಾಗಿದ್ದಾರೆ. ದೇಶದಿಂದ ಪಲಾಯನ ಮಾಡಲು ಮತ್ತು ಕ್ರಿಮಿನಲ್ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ತಮ್ಮ ರಾಜತಾಂತ್ರಿಕ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಪ್ರಜ್ವಲ್ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೊ ಮಾಡಿದ ಗಂಭೀರ ಸ್ವರೂಪದ ಆರೋಪಗಳು ಎಫ್ ಐಆರ್‌ನಲ್ಲಿ ದಾಖಲಾಗಿವೆ. ವಿದೇಶದಲ್ಲಿರುವ ಪ್ರಜ್ವಲ್ ಅವರನ್ನು ದೇಶಕ್ಕೆ ವಾಪಸ್ ಕರೆತರುವುದು ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವುದು ಅಸ್ತ್ರವಾಗಿದೆ. ಹೀಗಾಗಿ ಮತ್ತೊಮ್ಮೆ ಪತ್ರ ಬರೆದು ಮನವಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ. ಪಾಸ್‌ಪೋರ್ಟ್ ಕಾಯಿದೆ, 1967 ರ ಸೆಕ್ಷನ್ 10(3) (ಎಚ್) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿ ತ್ವರಿತ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ನಾನು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಮ್ಮ ಸುದೀರ್ಘ ಪತ್ರದಲ್ಲಿ ಪ್ರಧಾನಿ ನರೇಂದ್ರ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.