ಶಿಡ್ಲಘಟ್ಟ : ದಿಟ್ಟ ಮಹಿಳೆ ರೈತ ಹೋರಾಟಗಾರ್ತಿ ಬೆಳಗಾವಿಯ ರೈತನಾಯಕಿ ಜಯಶ್ರೀಗುರಣ್ಣ (40 ವರ್ಷ) ಅವರು ಬುಧವಾರದಂದು ಆಕಸ್ಮಿಕವಾಗಿ ನಿಧನರಾಗಿದ್ದು, ಇಂದು ನಗರದ ಕೋಟೆ ವೃತ್ತದ ಬಳಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯತ್ವದ ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಜಯಶ್ರೀ ಅವರ ಭಾವಚಿತ್ರವಿಟ್ಟು ಹೂವುಮಾಲೆ ಹಾಕಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ ಚಿಕ್ಕ ವಯಸ್ಸಿನಲ್ಲೆ ಪತಿಯನ್ನು ಕಳೆದುಕೊಂಡಿದ್ದ ಜಯಶ್ರೀ ಅವರು ಪತಿಯ ಸಾವಿನ ಬಳಿಕ ಗಂಡನ ಮನೆಯಲ್ಲಿ ಅನುಭವಿಸಿದ ದುಃಖ ಕಷ್ಟಗಳಿಂದ ಹೊರಬಂದು ತನಗಾದ ಶೋಷಣೆ ಮತ್ಯಾರಿಗೂ ಆಗಬಾರದೆಂದು ತನ್ನ ಚಿಕ್ಕ ಮಗನೊಂದಿಗೆ ಹೋರಾಟಗಾರ್ತಿ ಆದ ದಲಿತ ಸಮುದಾಯದ ಚೇತನ ಜಯಶ್ರೀ ಗುರಣ್ಣ ಸರ್ಕಾರೇತರ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡಿ ನಂತರ ಬೆಳಗಾವಿಯಲ್ಲಿ ರೈತ ಹೋರಾಟಕ್ಕೆ ಧುಮುಕಿದ್ದರು. ಕಬ್ಬಿಗೆ ಹೆಚ್ಚಿನ ಬೆಂಬಲ ಬೆಲೆ ಕೊಡಿಸಲು ಬೆಳಗಾವಿಯ ಸುವರ್ಣ ಸೌಧದ ಗೇಟಿನ ಬೀಗವನ್ನು ಒಡೆದು ರೈತರ ಕಬ್ಬಿನ ಲಾರಿಗಳನ್ನು ಸುವರ್ಣ ಸೌಧದ ಒಳಗೆ ನುಗ್ಗಿಸುವ ಕೆಚ್ಚೆದೆಯ ಹೋರಾಟ ಮಾಡಿ ರಾಜ್ಯದಾದ್ಯಂತ ಗಮನಸೆಳೆದಿದ್ದರು. ಧೈರ್ಯವಂತ ದಿಟ್ಟ ಮಹಿಳಾ ರೈತ ಹೋರಾಟಗಾರ್ತಿಯಾಗಿದ್ದರು ಅವರು ನಮ್ಮನ್ನೆಲ್ಲಾ ಅಗಲಿರುವುದು ರೈತ ಸಮೂಹಕ್ಕೆ ತುಂಬಾ ನಷ್ಟವಾಗಿದೆವೆಂದು ಸ್ಮರಿಸಿದರು.
ಬೆಳಗಾವಿಯ ಎಂ.ಕೆ.ಹೋಬಳಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆಯನ್ನು ಕಳುವು ಮಾಡುತ್ತಿದ್ದುದ್ದನ್ನು ಜಯಶ್ರೀ ಬಯಲಿಗೆಳೆದಿದ್ದರು ಅವರ ಹೋರಾಟದ ಹಾದಿ ಅವರು ರೈತರ ಪರವಾಗಿ ಮಾಡಿದ ಹೋರಾಟ ಮರೆಯಲು ಸಾಧ್ಯವೇ ಇಲ್ಲ. ಮನುಷ್ಯ ಹುಟ್ಟು ಸಾವಿನ ನಡುವೆ ಸಮಾಜ ಮುಖಿ ಮಾಡಿದರೆ ಈ ಸಮಾಜ ನಮ್ಮನ್ನು ಮರೆಯುವುದಿಲ್ಲ. ನಾವು ಮಾಡುವ ಉತ್ತಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅದ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನಚಾರ್ಯ, ಸಂತೇಕಲ್ಲಹಳ್ಳಿ ಆಂಜಿನಪ್ಪ, SN, ಮಾರಪ್ಪ, ದ್ಯಾವಪ್ಪ, ಬಶೆಟ್ಟಹಳ್ಳಿ ಹೊಬಳಿ ಅದ್ಯಕ್ಷ ದೊಡ್ಡತೇಕಹಳ್ಳಿ ಆಂಜಿನಪ್ಪ, ಡಿ.ವಿ. ನಾರಾಯಣಸ್ವಾಮಿ, ನಾಗೇಶ್, ಹಾಗೂ ಇತರರು ಭಾಗವಹಿಸಿದ್ದರು.