ಶಿಡ್ಲಘಟ್ಟ: ಸಾವು ಯಾವಾಗ ಯಾವ ರೂಪದಲ್ಲಿ ಹೇಗೆ ಬರುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಬೆಳಗ್ಗೆ ಮನೆಯಿಂದ ಹೊರಟು ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದ ಸರ್ಕಾರಿ ನೌಕರ ಪ್ರಥಮ ದರ್ಜೆ ಸಹಾಯಕ ಹೇಮಚಂದ್ರ ನಾಯ್ಕ ಇಂದು ತಾಲ್ಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಗುರುವಾರ ಮದ್ಯಾಹ್ನ ಸಮಯ ಸುಮಾರು 1:50 ರ ಸಮಯದಲ್ಲಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಅಸ್ವಸ್ತರಾಗಿ ಬಿದ್ದಿರುತ್ತಾರೆ. ಸಹದ್ಯೋಗಿಗಳು ತಕ್ಷಣವೇ ತಹಶೀಲ್ದಾರ್ ರವರ ಸರ್ಕಾರಿ ಜೀಪ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆದರೆ ಚಿಕಿತ್ಸೆ ಫಲಿಸದೇ ಹೇಮಚಂದ್ರ ನಾಯಕ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಮೃತಪಟ್ಟ ವಿಷಯ ತಿಳಿದ ತಕ್ಷಣವೇ ತಹಶೀಲ್ದಾರ್ ಬಿ.ಎನ್ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸಹದ್ಯೋಗಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಯ ಬಳಿ ಜಮಾಯಿಸಿ ಚಿರ ನಿದ್ರೆಗೆ ಜಾರಿದ್ದ ಹೇಮಚಂದ್ರ ನಾಯಕ್ ಪಾರ್ಥೀವ ಶರೀರದ ದರ್ಶನ ಪಡೆದು ಎಲ್ಲರೊಂದಿಗೆ ಉತ್ತಮ ಸ್ನೇಹ ಜೀವಿಯಾಗಿದ್ದ ವ್ಯಕ್ತಿ ಇಷ್ಟು ಬೇಗ ಅಗಲಿರುವುದು ನೋವಿನ ಸಂಗತಿಯಾಗಿದೆಯೆಂದು ಭಾವನಾತ್ಮಕವಾಗಿ ನಮನಗಳು ಸಲ್ಲಿಸಿದರು.
ಈ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿ. ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತಿಚೇಗೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಮರಳಿ ಇದೇ ತಾಲ್ಲೂಕು ಕಛೇರಿಗೆ ಬಂದಿದ್ದು, ಕಂದಾಯ ಇಲಾಖೆಯ ಎನ್.ಸಿ.ಆರ್ ವಿಭಾಗದ ಕೇಸ್ ವರ್ಕರ್ ಆಗಿ ಜವಬ್ದಾರಿ ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಇಂದು (ಗುರುವಾರ ಸಮಯ 1:50) ಕ್ಕೆ ಬಾರದ ಲೋಕಕ್ಕೆ ಹೊರಟಿದ್ದಾರೆ. ಮೃತರು ಪತ್ನಿ, 04 ವರ್ಷದ ಮಗ, ಸೇರಿದಂತೆ ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ. ತಹಶೀಲ್ದಾರ್ ಬಿ.ಎನ್ ಸ್ವಾಮಿ ತೀವ್ರ ಸಂತಾಪ ಸೂಚಿಸಿದ್ದಾರೆ.