‘ಸಂವಿಧಾನ ಶಕ್ತಿ ನ್ಯೂಸ್ ‘ ಶಿಡ್ಲಘಟ್ಟ : ದೇಶದ ಸ್ವಾತಂತ್ರಕ್ಕಾಗಿ ಅನೇಕ ಮಹನೀಯರು ಹೋರಾಟ ಮಾಡಿ ಸ್ವಾತಂತ್ರ ಬಂದಿರುವುದರಿಂದ ದೇಶದ ಜನ ನೆಮ್ಮದಿಯಾಗಿ ಜೀವನ ಮಾಡುವ ಅವಕಾಶ ಸಿಕ್ಕಿದೆ. ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಜೊತೆಗೆ ಎಲ್ಲಾ ಸಮುದಾಯಗಳ ಜನರಿಗೆ ಮತದಾನದ ಹಕ್ಕುನ್ನು ಕಲ್ಪಿಸಿದ್ದಾರೆ. ಸಂವಿಧಾನ ರಚನೆಯಾಗಿ 76 ವರ್ಷಗಳಾಗಿದೆ. ನಮ್ಮ ಸಂವಿಧಾನದ ಕುರಿತು ಪ್ರತಿಯೊಬ್ಬರೂ ತಿಳಿದುಕೊಂಡಾಗ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ದೇಶಕ್ಕಾಗಿ ಪ್ರಾಣ ಕೊಟ್ಟ ಮಹನೀಯರನ್ನ ಸ್ಮರಿಸಬೇಕು ಎಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರು ಜವಬ್ದಾರಿಯುತವಾಗಿ ನಡೆದಾಗ ದೇಶಕ್ಕೆ ಒಳ್ಳೆಯದಾಗುತ್ತದೆ ಜಗತ್ತಿನಲ್ಲಿ ದೇಶ ಉನ್ನತ ಸ್ಥಾನಕ್ಕೆ ಹೋಗುತ್ತದೆ. ನನ್ನ ಅಧಿಕಾರದ ಅವಧಿಯಲ್ಲಿ ಜನ ಕೊಟ್ಟ ಅಧಿಕಾರ ದುರುಪಯೋಗವಾಗುವುದಕ್ಕೆ ಬಿಡುವುದಿಲ್ಲ. ವಿದ್ಯಾಭ್ಯಾಸ,ಆರೋಗ್ಯಕ್ಕೆ ಆದ್ಯತೆ ನೀಡಲಾಗುವುದು ಎಲ್ಲಾ ಸಮುದಾಯಗಳ ಪರವಾಗಿ ಪ್ರಾಮಾಣಿಕವಾಗಿ ಕೆಲಸಮಾಡುತ್ತೇನೆ ಎಂದರು.
ನೆಹರೂ ಕ್ರಿಡಾಂಗಣದಲ್ಲಿ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ತಹಶೀಲ್ದಾರ್ ಬಿ.ಎನ್ ಸ್ವಾಮಿ ಹಾಗೂ ಶಾಸಕ. ಬಿ.ಎನ್ ರವಿಕುಮಾರ್ ನೆರವೇರಿಸಿದರು.
ತಹಶೀಲ್ದಾರ್ ಬಿ.ಎನ್ ಸ್ವಾಮಿ ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಎಲ್ಲಾ ಹೋರಾಟಗಾರರು ಬ್ರಿಟಿಷರ ವಿರುದ್ದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದರು. ನೇರವಾಗಿ ಅಥವಾ ಪರೋಕ್ಷವಾಗಿ ಆಯ್ಕೆಯಾದ ಸರ್ಕಾರ ದೇಶದ ಪ್ರಮುಖ ನಾಯಕರನ್ನ ಆಯ್ಕೆ ಮಾಡಲಾಗುತ್ತದೆ. ಭಾರತ ದೇಶದಲ್ಲಿ ಗಣರಾಜ್ಯ ವ್ಯವಸ್ಥೆಯಿದೆ. ಜನರು ತಮಗೆ ಬೇಕಾದಂತಹ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಶಾಸಕರು ಮತ್ತು ಸಂಸದರ ಮೂಲಕ ಆಯ್ಕೆ ಮಾಡಿಕೊಂಡು ದೇಶದ ಅತ್ಯಂತ ಉನ್ನತ ಪ್ರಥಮ ಹುದ್ದೆಯಾದ ರಾಷ್ಟ್ರಪತಿಯನ್ನ ಆಯ್ಕೆಮಾಡುತ್ತಾರೆ. ಭಾರತ ದೇಶ ಸಹ ಗಣರಾಜ್ಯವಾಗಿದೆ. ಪ್ರತಿಯೊಬ್ಬ ನಾಗರೀಕನೂ ಸಹ ವ್ಯವಸ್ಥೆಯಲ್ಲಿ ತನ್ನದೇ ಆದ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಸರ್ಕಾರಿ ಕಛೇರಿ, ಸಾರ್ವಜನಿಕ ಸ್ಥಳಕ್ಕೆ ಯಾವುದೇ ಜಾತಿ ಬೇದ ಗಂಡು- ಹೆಣ್ಣು ಬೇದವಿಲ್ಲದೆ ಮುಕ್ತವಾದ ಅವಕಾಶ ಇದೆ. ಮೂಲಭೂತ ಹಕ್ಕುಗಳು, ಸ್ವಾತಂತ್ರವನ್ನು ಸಂವಿಧಾನ ನೀಡಿದೆ. ಜನವರಿ 26 1950 ರಂದು ಸಂವಿಧಾನ ಜಾರಿಗೆ ಬಂದಿರುವ ದಿನವನ್ನು ಪ್ರತಿವರ್ಷ ಗಣರಾಜ್ಯೋತ್ಸವ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.
ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು , ಪೊಲೀಸ್ ಸಿಬ್ಬಂದಿ ಪಥಸಂಚಲದಲ್ಲಿ ಶಿಸ್ತಿನಿಂದ ಭಾಗವಹಿಸಿದರು. ತೆರದ ಜೀಪ್ ನಲ್ಲಿ ಶಾಸಕ ಬಿ.ಎನ್ ರವಿಕುಮಾರ್ ಹಾಗೂ ತಹಶೀಲ್ದಾರ್ ಬಿ.ಎನ್ ಸ್ವಾಮಿ ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್, ಪಥ ಸಂಚಾರದಲ್ಲಿ ಸಾಗಿ ಗೌರವ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಹೇಮಾವತಿ, ನಗರಸಭೆ ಪೌರಾಯುಕ್ತ ಮಂಜುನಾಥ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಸರ್ಕಲ್ ಇನಸ್ಪೆಕ್ಟರ ಎಂ. ಶ್ರೀನಿವಾಸ್, ತಾದೂರು ರಘು, ರೈತ ಸಂಘ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.