ಬೆಂಗಳೂರು: ಮಳೆಗಾಲ ಮೊಡಮುಚ್ಚಿದ ವಾತಾವರಣ ಹೀಗಿರುವ ವಾತಾವರಣದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಡೆಂಗ್ಯೂ ಜ್ವರದ ಭಯದ ಕಾಡುತ್ತಿದೆ. ಮಹಾನಗರ ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಇಬ್ಬರನ್ನು ಬಲಿ ಪಡೆದಿದೆ. ಮೃತರನ್ನು 27 ವರ್ಷದ ಅಭಿಲಾಷ್ ಹಾಗೂ 80 ವರ್ಷದ ನೀರಜಾ ದೇವಿ ಎಂದು ಗುರುತಿಸಲಾಗಿದೆ.
ಈ ಎರಡೂ ಪ್ರಕರಣಗಳು ಬಿಬಿಎಂಪಿಯ ಪೂರ್ವ ವಲಯದಲ್ಲಿ ದಾಖಲಾಗಿವೆ. ಜ್ವರದಿಂದ ಬಳಲುತ್ತಿದ್ದ ಸಿ.ವಿ.ರಾಮನ್ ನಗರದ ನಿವಾಸಿ ಅಭಿಲಾಷ್ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯಲ್ಲಿ ಡೆಂಗ್ಯೂ ಜ್ವರ ಸೋಂಕಿರುವುದು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂ.27ರಂದು ಸಾವನ್ನಪ್ಪಿದ್ದಾರೆ.
ತಮಿಳುನಾಡಿನ ಮೂಲದ ನೀರಜಾ ಕ್ಯಾನ್ಸರ್ ಚಿಕಿತ್ಸೆ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ತಿಂಗಳ 20ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂ.23 ರಂದು ಸಾವನ್ನಪ್ಪಿದ್ದಾರೆ.
ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವುದು ಕಂಟಕವಾಗಿದೆ. ಒಟ್ಟಾರೆ ರಾಜ್ಯಾದ್ಯಂತ 4,364 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಗುರುವಾರ ಒಂದೇ ದಿನದಲ್ಲಿ 51 ಜನರಲ್ಲಿ ಡೆಂಗ್ಯೂ ಪತ್ತೆಯಾಗಿ ರುವುದು ಭೀತಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಈವರೆಗೆ 1,520ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸಹಜವಾಗಿ ಡೆಂಗ್ಯೂ ಜ್ವರ ಬಂದಾಗ ಅತಿಯಾದ ತಲೆ ನೋವು ಕಾಡುತ್ತದೆ.
ಎರಡನೇ ದಿನಕ್ಕೆ ಅತಿಯಾದ ಜ್ವರ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅಲ್ಲದೇ, ಡೆಂಗ್ಯೂ ಪ್ರಕರಣಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಡ್ರೈ ಡೇ ಟಾಸ್ಕ್ ನೀಡಿದ್ದು, ಇದರ ಜತೆ ಮನೆಮನೆ ಸಮೀಕ್ಷೆ ನಡೆಸಲು ಮುಂದಾಗಿದೆ.