ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಯಣ್ಣಂಗೂರು ಗ್ರಾಮದ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೂಜ್ಯ ಡಾ ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ್ದ ರೂ. 2,00,000=00 ಮೊತ್ತದ ಡಿ.ಡಿ ಯನ್ನು ದೇವಸ್ಥಾನ ಅಭಿವೃದ್ದಿ ಸಮಿತಿಯವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್.ಸಿ.ಎಸ್ ವಿತರಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಪೂಜ್ಯರು ರಾಜ್ಯದ ಉದ್ದಗಲಕ್ಕೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಾಲಿನ ಡೈರಿ ಕಟ್ಟಡ ರಚನೆಗೆ ಅನುದಾನ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ, ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ, ಶಾಲಾ ಕಟ್ಟಡ ರಚನೆಗೆ ಅನುದಾನ, ಜ್ಞಾನದೀಪ ಶಿಕ್ಷಕರ ಒದಗಣೆ, ಸುಜ್ಞಾನನಿಧಿ ಶಿಷ್ಯ ವೇತನ ವಿತರಣೆ, ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೈದ್ಯಕೀಯ ಸಲಕರಣೆಗಳ ವಿತರಣೆ ಮಾಡುವ ಮೂಲಕ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಆಂಜನೇಯ ಗೌಡ ಮಾತನಾಡಿ ಧರ್ಮಸ್ಥಳ ಯೋಜನೆಯ ಮೂಲಕ ರಾಜ್ಯದ ಗ್ರಾಮ ಗ್ರಾಮಗಳಲ್ಲಿಯೂ ದೇವಸ್ಥಾನ ಜೀರ್ಣೋದ್ಧಾರ, ಸಮುದಾಯ ಭವನ ನಿರ್ಮಾಣ, ಹಾಲಿನ ಡೈರಿ ಕಟ್ಟಡ ರಚನೆ ಮುಂತಾದವುಗಳಿಗೆ ಅನುದಾನ ಒದಗಿಸುವ ಮೂಲಕ ಗ್ರಾಮಗಳ ಕಲ್ಯಾಣಕ್ಕಾಗಿ ಪೂಜ್ಯರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಯಣ್ಣಂಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾದ ರಾಮಕೃಷ್ಣ ಅವರು ಮಾತನಾಡಿ ಧರ್ಮಸ್ಥಳದ ಇಂತಹ ಕಾರ್ಯಕ್ರಮಗಳಿಂದ ಸಮಾಜದ ಅನೇಕ ಕುಟುಂಬಗಳಿಗೆ, ಗ್ರಾಮಗಳಿಗೆ ಉಪಯೋಗವಾಗಿದೆ. ಧರ್ಮಸ್ಥಳ ಯೋಜನೆಯ ಸಮಾಜಮುಖಿ ಕೆಲಸಗಳಿಗೆ ಮಾರ್ಗದರ್ಶಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುರೇಶ್ ಗೌಡ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅರುಣಾ ಸೇವಾಪ್ರತಿನಿಧಿ ಸಾವಿತ್ರಿ, ಸೇರಿದಂತೆ ಊರಿನ ಪ್ರಮುಖ ಗಣ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.