ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೌಲಭ್ಯಗಳು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದ : ಪ್ರಶಾಂತ್ ಸಿ.ಎಸ್.
ಶಿಡ್ಲಘಟ್ಟ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ರೂ 2 ಲಕ್ಷ ಮೊತ್ತದ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್.ಸಿ.ಎಸ್ ಅವರು ವಿತರಿಸಿದರು.
ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಪೂಜ್ಯರು ರಾಜ್ಯದ ಎಲ್ಲಾ ಗ್ರಾಮ ಗ್ರಾಮಗಳಲ್ಲಿಯೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಾಲಿನ ಡೈರಿ ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಅನುಧಾನವನ್ನು ನೀಡುತ್ತಿದ್ದಾರೆ. ಅಲ್ಲದೆ ಕಲಬುರ್ಗಿ ಜಿಲ್ಲಾ ವ್ಯಾಪ್ತಿಯಲ್ಲಿ ಕ್ಷೀರ ಕ್ರಾಂತಿಗೆ ಹೆಚ್ಚು ಒತ್ತು ನೀಡಿ ತಮ್ಮ ರಾಜ್ಯಸಭಾ ಸದಸ್ಯರ ಫಂಡ್ ನ ಮೊತ್ತವನ್ನು ಹಾಲು ಉತ್ಪಾದನೆಯ ಅಭಿವೃದ್ಧಿಗಾಗಿ ಬಳಸುತ್ತಿದ್ದಾರೆ ಎಂದು ತಿಳಿಸಿದರು.
ಇದಲ್ಲದೆ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುಧಾನ,ಸಮುದಾಯ ಭವನ ನಿರ್ಮಾಣಕ್ಕಾಗಿ ಅನುಧಾನ,ಶಾಲಾ ಕಟ್ಟಡಕ್ಕೆ ಅನುದಾನ, ಜ್ಞಾನದೀಪ ಶಿಕ್ಷಕರ ಒದಗಣೆ, ಸುಜ್ಞಾನನಿಧಿ ಶಿಷ್ಯ ವೇತನ ವಿತರಣೆ, ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೈದ್ಯಕೀಯ ಸಲಕರಣೆಗಳ ವಿತರಣೆ, ನಿರ್ಗತಿಕರ ಮಾಸಾಶನ ವಿತರಣೆ ಮಾಡುವ ಮೂಲಕ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಾರಾಯಣದಾಸರಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಯಾದ ಆನಂದ್ ಅವರು ಮಾತನಾಡಿ ಧರ್ಮಸ್ಥಳ ಯೋಜನೆಯು ಆರ್ಥಿಕ ಅಭಿವೃದ್ಧಿಯೊಂದಿಗೆ ಸಾಮಾಜಿಕ ಅಭಿವೃದ್ಧಿಯ ಉದ್ದೇಶದ ಮೂಲಕ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಸಹ ಸೌಲಭ್ಯವನ್ನು ದೊರಕಿಸುತ್ತಿದೆ. ಪೂಜ್ಯರ ಎಲ್ಲಾ ಕಾರ್ಯಕ್ರಮಗಳ ಆಶಯವು ಸಾಮಾಜಿಕ ಕಾಳಜಿಯನ್ನು ಹೊಂದಿದೆ ಇದಕ್ಕಾಗಿ ಪೂಜ್ಯರಿಗೆ ಹಾಗೂ ಗ್ರಾಮಾಭಿವೃದ್ದಿ ಯೋಜನೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ,ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಒಕ್ಕೂಟ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ , ಉಪಾಧ್ಯಕ್ಷ ವೇಣುಗೋಪಾಲ್, ವಲಯದ ಮೇಲ್ವಿಚಾರಕಿ ಪಲ್ಲವಿ, ಸೇವಾಪ್ರತಿನಿಧಿಗಳಾದ ಭಾಗ್ಯವತಿ ಮತ್ತು ರೂಪ, ಊರಿನ ಗಣ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.