ಭೂ ಸುರಕ್ಷಾ ಯೋಜನೆಗೆ ಗುಡಿಬಂಡೆಯಲ್ಲಿ ಚಾಲನೆ.
‘ಸಂವಿಧಾನ ಶಕ್ತಿ ನ್ಯೂಸ್’ ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ, ಭೂಮಾಪನ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯ ಎ ಮತ್ತು ಬಿ ವರ್ಗದ ಕಡತಗಳ ಎಲ್ಲಾ ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ಸ್ಕ್ಯಾನ್ ಮಾಡಿ ಆ ಎಲ್ಲಾ ದಾಖಲೆಗಳು ಆನ್ ಲೈನ್ ಮೂಲಕ ಎಲ್ಲಾ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿಸುವ ರಾಜ್ಯ ಸರ್ಕಾರದ “ಭೂಸುರಕ್ಷಾ ಯೋಜನೆ”ಗೆ ಇಂದು ಗುಡಿಬಂಡೆ ತಾಲ್ಲೂಕಿನ ಮೂಲಕ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ನಗರದಲ್ಲಿ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಮಾರ್ಚ್ 2024 ರಲ್ಲಿ ರಾಜ್ಯ ಕಂದಾಯ ಇಲಾಖೆ ತಾಲ್ಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ಭೂಮಾಪನ ಇಲಾಖೆಯ ಸುಮಾರು 150 ವರ್ಷಗಳ ಎಲ್ಲಾ ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ಸ್ಕ್ಯಾನ್ ಮಾಡಿ ಶಾಶ್ವತವಾಗಿ ಭದ್ರ ಮಾಡುವ ಹಾಗೂ ಆ ಎಲ್ಲಾ ದಾಖಲೆಗಳು ಆನ್ ಲೈನ್ ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಆರಂಭದಲ್ಲಿ ಪೈಲಟ್ ಯೋಜನೆಯ ಭಾಗವಾಗಿ ಪ್ರತಿ ಜಿಲ್ಲೆಯಿಂದ ಒಂದು ತಾಲ್ಲೂಕನ್ನು ಆಯ್ಕೆ ಮಾಡಿಕೊಂಡು ಒಟ್ಟು 31 ತಾಲ್ಲೂಕುಗಳಲ್ಲಿ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಈಗ ಉಳಿದ 209 ತಾಲ್ಲೂಕುಗಳಲ್ಲಿ ಭೂಸುರಕ್ಷಾ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಯೋಜನೆಯಿಂದ ರೈತರು ಸಾರ್ವಜನಿಕರಿಗೆ ಸುಮಾರು 150 ವರ್ಷದ ಹಳೆಯ ದಾಖಲೆಗಳು ಸ್ಕ್ಯಾನ್ ಆಗಿ ಕಂಪ್ಯೂಟರೀಕರಣಗೊಂಡು ಆನ್ ಲೈನ್ ನಲ್ಲಿ ಲಭ್ಯವಾಗಲಿವೆ. ಈ ದಾಖಲೆಗಳನ್ನು ಸಂಬಂಧಿಸಿದ ಕಚೇರಿಗಳಿಗೆ ಹೋಗದೆ ಇಂದು ಆರ್.ಟಿ.ಸಿ ಪಹಣಿಯನ್ನು ಆನ್ಲೈನ್ ನಲ್ಲಿ ಪಡೆಯುವ ವ್ಯವಸ್ಥೆಯಂತೆ ಮನೆಯಲ್ಲೇ ಕುಳಿತು ನೋಡಲು, ಮುದ್ರಿಸಿಕೊಳ್ಳಲು ಹಾಗೂ ದೃಢೀಕೃತ ಪ್ರತಿಗಳನ್ನು ಪಡೆಯಲು ಅವಕಾಶವಾಗಲಿದೆ. ಇದರಿಂದ ಶಿಥಿಲಾವಸ್ಥೆಯಲ್ಲಿರುವ ಅತ್ಯಂತ ಹಳೆಯ ದಾಖಲೆಗಳೂ ಸೇರಿದಂತೆ ವಿವಿಧ ದಾಖಲೆಗಳು ಆನ್ ಲೈನ್ ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಲಿದ್ದು, ದಾಖಲೆಗಳು ಶಾಶ್ವತವಾಗಿ ಬಂದೋ ಬಸ್ತ್ ಆಗಲಿವೆ ಎಂದರು.
ಭೂ ಸುರಕ್ಷಾ ಯೋಜನೆಯ ಮೂಲಕ ರೈತರಿಗೆ ಜಮೀನಿನ ಮಾಲೀಕತ್ವದ ಗ್ಯಾರಂಟಿಯನ್ನು ನೀಡಲು ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈಗಾಗಲೇ 31 ತಾಲ್ಲೂಕುಗಳಲ್ಲಿ 08 ತಿಂಗಳ ಹಿಂದೆ ಆರಂಭವಾದ ಪೈಲಟ್ ಕಾರ್ಯಕ್ರಮದಡಿ 14,87000 ಕಡತಗಳನ್ನು ಸ್ಕ್ಯಾನ್ ಮಾಡಿ ಒಟ್ಟು 7 ಕೋಟಿ 95ಲಕ್ಷ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಉಳಿದ 209 ತಾಲ್ಲೂಕುಗಳ ಒಟ್ಟು 150 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಗುರಿ ಹೊಂದಲಾಗಿದೆ. ಈ ಮಹತ್ವದ ಯೋಜನೆಯಿಂದ ತಾಲ್ಲೂಕು ಕಚೇರಿಯ ದಾಖಲೆಗಳ ಕೊಠಡಿಯ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲಿದೆ. ರೈತರಿಗೆ ಜಮೀನಿನ ಮಾಲೀಕತ್ವದ ದಾಖಲೆಗಳು ಸುರಕ್ಷಿತವಾಗಿ ಮತ್ತು ಸುಲಭವಾಗಿ ಲಭ್ಯವಾಗುತ್ತವೆ. ಜೊತೆಗೆ ಹಳೆಯ ದಾಖಲೆಗಳು ಶಾಶ್ವತವಾಗಿ ಮತ್ತು ಬಂದೋಬಸ್ತ್ ಆಗಿ ಉಳಿಯುತ್ತವೆ, ಅಲ್ಲದೇ ದಾಖಲೆಗಳ ಕೊಠಡಿಯ ದಾಖಲೆಗಳು ನಕಲಿ ಆಗುವುದು, ಕಳೆದು ಹೋಗುವುದು ತಪ್ಪುತ್ತದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ತಹಸಿಲ್ದಾರ್ ನ್ಯಾಯಾಲಯದಲ್ಲಿ 3 ತಿಂಗಳಿಗೂ ವಾಯಿದೆ ಮೀರಿದ 10,774 ಪ್ರಕರಣಗಳು ರಾಜ್ಯದಲ್ಲಿ ಬಾಕಿ ಇದ್ದವು, ಪ್ರಸ್ತುತ ಅವುಗಳನ್ನು ವಿಲೆ ಮಾಡಿ 409 ಪ್ರಕರಣಗಳಿಗೆ ಇಳಿಕೆ ಮಾಡಲಾಗಿದೆ, ಅದೇ ರೀತಿ ಉಪವಿಭಾಧಿಕಾರಿಗಳ ಮಟ್ಟದಲ್ಲಿ 6 ತಿಂಗಳಿಗೂ ಅವಧಿ ಮೀರಿದ 59,339 ಪ್ರಕರಣಗಳು ಬಾಕಿ ಇದ್ದವು ವಿಶೇಷ ಉಪವಿಭಾಗಾಧಿಕಾರಿಳನ್ನು ನೇಮಕ ಮಾಡಿ ಆ ಪ್ರಕರಣಗಳನ್ನು 22,400ಕ್ಕೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಿ ಶೂನ್ಯಕ್ಕೆ ತರಲಾಗುವುದು ಎಂದರು.
2025ಕ್ಕೇ ಚೇಳೂರು ತಾಲ್ಲೂಕು ಕಚೇರಿ ಕಟ್ಟಡ ಮಂಜೂರು : ಜಿಲ್ಲೆಯಲ್ಲಿ ನೂತನವಾಗಿ ರಚನೆಯಾಗಿರುವ ಚೇಳೂರು ತಾಲ್ಲೂಕಿಗೆ ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಹಣವನ್ನು ಈ ವರ್ಷ ಮಂಜೂರು ಮಾಡಲಾಗುವುದು. ಮುಂದಿನ ವರ್ಷ ಮಂಚೇನಹಳ್ಳಿ ತಾಲ್ಲೂಕಿನ ಕಚೇರಿಗೆ ಮಂಜೂರು ಮಾಡಲಾಗುವುದು. ಮುಖ್ಯವಾಗಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಭಾಗಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಶಾಶ್ವತ ಕುಡಿಯುವ ನೀರಿನ ಯೋಜನೆಯಾದ ಎತ್ತಿನ ಹೋಳೆ ಯೋಜನೆಯ ನೀರನ್ನು ತರುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದು ಕಂದಾಯ ಸಚಿವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ ಸುಧಾಕರ್ ಅವರು ಮಾತನಾಡಿ, ಬಹುದಶಕಗಳಿಂದ ಸವಾಲಾಗಿದ್ದ ಜೋಡಿ ಗ್ರಾಮಗಳ ಭೂ ದಾಖಲೆಗಳನ್ನು ಸರಿಪಡಿಸಲು ದಿಟ್ಟ ಕ್ರಮವಹಿಸುವಲ್ಲಿ ಈಗಿನ ಕಂದಾಯ ಸಚಿವರು ಮತ್ತು ನಮ್ಮ ಸರ್ಕಾರದ ಇಚ್ಚಾಶಕ್ತಿಯೇ ಪ್ರಮುಖ ಕಾರಣ, ಅದೇ ರೀತಿ ರೈತರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಭೂ ದಾಖಲೆಗಳ ಸಮಸ್ಯೆಗಳನ್ನು ಶಾಶ್ವತವಾಗಿ ದೂರವಾಗಿಸಲು ನಮ್ಮ ಸರ್ಕಾರ ರೂಪಿಸಿರುವ “ಭೂ ಸುರಕ್ಷಾ ಯೋಜನೆ” ತುಂಬಾ ಸಹಾಯಕಾರಿಯಾಗಿದೆ. ಬೆಂಗಳೂರಿನ ತ್ಯಾಜ್ಯ ನೀರನ್ನು ಈ ಭಾಗದ ಕೆರೆಗಳಿಗೆ ತುಂಬಿಸುವ ಹೆಚ್.ಎನ್ ಮತ್ತು ಕೆ.ಸಿ ವ್ಯಾಲಿ ಯೋಜನೆಗೆ ಕೃಷ್ಣಭೈರೇಗೌಡರ ದೂರದೃಷ್ಟಿಯೇ ಮುಖ್ಯ ಕಾರಣ ಎಂದು ಬಣ್ಣಿಸಿದರು.
ಅಮೃತ್ 2 ಯೋಜನೆಯಡಿ 18 ಕೋಟಿ: ಅಮಾನಿ ಭೈರ ಸಾಗರ ಕೆರೆಯಿಂದ ಗುಡಿಬಂಡೆ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ ಅಮೃತ್ 2 ಯೋಜನೆಯಡಿ 18 ಕೋಟಿ ನಿಗದಿಪಡಿಸಲಾಗಿದೆ. ಸದ್ಯದಲ್ಲೆ ಈ ಕಾಮಗಾರಿಗೆ ಚಾಲನೆ ನೀಡಲು ಯೋಜಿಸಲಾಗಿದೆ. ಅಲ್ಲದೆ ಬಾಗೇಪಲ್ಲಿ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಈ ಭಾಗದ ವಿದ್ಯಾವಂತರಿಗೆ ಉದ್ಯೋಗ ಕೊಡುವ ಉದ್ದೇಶದಿಂದ ಈಗಾಗಲೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ 600 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ಹೂವಿನ ಮಾರುಕಟ್ಟೆಯನ್ನು 140 ಕೋಟಿ ವೆಚ್ಚದಲ್ಲಿ 20 ಎಕರೆ ಜಾಗದಲ್ಲಿ ನಿರ್ಮಿಸಲು ಗುರಿಹೊಂದಲಾಗಿದ್ದು, ಮುಂದಿನ ಆಯವ್ಯಯದಲ್ಲಿ ಈ ಉದ್ದೇಶಕ್ಕೆ ಅನುದಾನದವನ್ನು ಮೀಸಲಿಡಲು ಯೋಜಿಸಲಾಗಿದೆ. ಒಟ್ಟಾರೆ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ವಸ್ತುನಿಷ್ಠವಾಗಿ ಮತ್ತು ಪ್ರಾದೇಶಿಕ ಭೇದ ರಹಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರು ಮಾತನಾಡಿ,ತಾಲ್ಲೂಕು ಕಚೇರಿ ಮತ್ತು ನೋಂದಣಾಧಿಕಾರಿಗಳ ಕಚೇರಿಗಳ ಅಭಲೇಖಾಲಯದಲ್ಲಿದ್ದ ಕಡತಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೇರ್ಪಡೆಯಾಗುವಂತಹ ಕಿಡಿಗೇಡಿ ಪ್ರಕರಣಗಳಿಗೆ ಇಂದು ಜಾರಿಗೆ ತಂದಿರುವ “ಭೂ ಸುರಕ್ಷ ಯೋಜನೆ ಶಾಶ್ವತ ಮುಕ್ತಿ ನೀಡಲಿದೆ. ಅಂತಹ ನಕಲಿ ಸೃಷ್ಠಕರ್ತರಿಗೆ ಈಗಿನ ಕಂದಾಯ ಸಚಿವರು ಸಿಂಹ ಸ್ವಪ್ನರಾಗಿದ್ದಾರೆ. ಸರ್ಕಾರಿ ಜಮೀನುಗಳು, ಸ್ಥಳಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ನಮ್ಮ ಸರ್ಕಾರ ವಿನೂತನ ಪ್ರಯೋಗ ಮಾಡಿ “ಲ್ಯಾಂಡ್ ಸೀಲಿಂಗ್” ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪೋಡಿ ಮುಕ್ತ, ಪೈಕಿ ಮುಕ್ತ ಅನುಷ್ಠಾನ ಮಾಡುವಲ್ಲಿ ಗುಡಿಬಂಡೆ ತಾಲ್ಲೂಕು ರಾಜ್ಯದಲ್ಲೆ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ ಪಿ-ನಂಬರ್ ನ ಜಮೀನುಗಳನ್ನು ದುರಸ್ತಿ ಮಾಡುವ ಯೋಜನೆಯಲ್ಲಿ ಗುಡಿಬಂಡೆ ಅಗ್ರ ಸ್ಥಾನ ಉಳಿಸಿಕೊಳ್ಳಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಾದ ಮೌಲ, ಗಂಗಾದೇವಿ, ಕೋಮಲ, ನಾರಯಣಮ್ಮ ಶಶಿಕಲ, ಸುಶಿಲಮ್ಮ ರವರಿಗೆ ಪಿಂಚಣಿ ಮಂಜೂರು ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಂದಾಯ ಆಯುಕ್ತರಾದ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಧಿಕಾರದ ಕೆ.ಎನ್, ಕೇಶವರೆಡ್ಡಿ, ಗುಡಿಬಂಡೆ ಪಟ್ಟಣ ಪಂಚಾಯತಿ ಅಧ್ಯಕ್ಷ ವಿಕಾಸ್ .ಎ, ಉಪಾಧ್ಯಕ್ಷ ಗಂಗರಾಜು, ತಹಸಿಲ್ದಾರ್ ಸಿಗ್ಬತ್ ವುಲ್ಲ, ಗುಡಿಬಂಡೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ ನಾಗಮಣಿ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ರೈತರು ಹಾಜರಿದ್ದರು.