ಸಾದಲಿ ವೀರಗಾರಸ್ವಾಮಿ ದೇವಸ್ಥಾನ ಸಮಿತಿಗೆ ಡಿಡಿ ವಿತರಣೆ.
ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಹೋಬಳಿಯ ಸಾದಲಿ ಗ್ರಾಮದ ಶ್ರೀ ವೀರಗಾರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದ 1 ಲಕ್ಷ 50 ಸಾವಿರ ಮೊತ್ತದ ಡಿ.ಡಿ ಯನ್ನು ದೇವಸ್ಥಾನ ಅಭಿವೃದ್ದಿ ಸಮಿತಿಯವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್.ಸಿ.ಎಸ್ ವಿತರಿಸಿದರು.
ಡಿ.ಡಿ ವಿತರಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರ್.ಬಿ.ಐ ನಿಯಮದ ಪ್ರಕಾರ ರಾಷ್ಟ್ರೀಕೃತ ಬ್ಯಾಂಕುಗಳ ಬಿ.ಸಿ.ಪ್ರತಿನಿಧಿಯಾಗಿ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ಬ್ಯಾಂಕಿನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದೆ. ಪೂಜ್ಯರು ರಾಜ್ಯದ ಉದ್ದಗಲಕ್ಕೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಾಲಿನ ಡೈರಿ ಕಟ್ಟಡ ರಚನೆಗೆ ಅನುದಾನ,ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ,ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ,ಶಾಲಾ ಕಟ್ಟಡ ರಚನೆಗೆ ಅನುದಾನ,ಜ್ಞಾನದೀಪ ಶಿಕ್ಷಕರ ಒದಗಣೆ,ಸುಜ್ಞಾನನಿಧಿ ಶಿಷ್ಯ ವೇತನ ವಿತರಣೆ,ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೈದ್ಯಕೀಯ ಸಲಕರಣೆಗಳ ವಿತರಣೆ ಮಾಡುವ ಮೂಲಕ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮಗಳನ್ನು ಎಲ್ಲಾರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾಕರ್. ಎಸ್ ಅವರು ಮಾತನಾಡಿ ಧರ್ಮಸ್ಥಳ ಯೋಜನೆಯ ಮೂಲಕ ರಾಜ್ಯದ ಗ್ರಾಮ ಗ್ರಾಮಗಳಲ್ಲಿಯೂ ದೇವಸ್ಥಾನ ಜೀರ್ಣೋದ್ಧಾರ,ಸಮುದಾಯ ಭವನ ನಿರ್ಮಾಣ,ಹಾಲಿನ ಡೈರಿ ಕಟ್ಟಡ ರಚನೆ ಮುಂತಾದವುಗಳಿಗೆ ಅನುದಾನ ಒದಗಿಸುವ ಮೂಲಕ ಗ್ರಾಮಗಳ ಕಲ್ಯಾಣಕ್ಕಾಗಿ ಪೂಜ್ಯರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾದಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ವಿಜಯಾನಂದ ಮಾತನಾಡಿ ಧರ್ಮಸ್ಥಳದ ಇಂತಹ ಕಾರ್ಯಕ್ರಮಗಳಿಂದ ಸಮಾಜದ ಅನೇಕ ಕುಟುಂಬಗಳಿಗೆ, ಗ್ರಾಮಗಳಿಗೆ ಉಪಯೋಗವಾಗಿದೆ. ಧರ್ಮಸ್ಥಳ ಯೋಜನೆಯ ಸಮಾಜಮುಖಿ ಕೆಲಸಗಳಿಗೆ ಮಾರ್ಗದರ್ಶಕರಾದ ಪೂಜ್ಯರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸುರೇಶ್ ಗೌಡ, ಸಾದಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಮಂಜುನಾಥ, ದೇವಸ್ಥಾನ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಮುನಿಆಂಜಿನಪ್ಪ, ಮೇಲ್ವಿಚಾರಕ ಭೂತಯ್ಯ ಸೇವಾಪ್ರತಿನಿಧಿ ಮೋಹನ್, ಊರಿನ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.